ಮಡಿಕೇರಿ, ಏ. 8: ಕೊಡಗು ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘದ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪಿ.ಆರ್. ಭರತ್, ಕರ್ತವ್ಯದ ವೇಳೆ ಜಿಲ್ಲೆಯ ಗ್ರಾ.ಪಂ. ನೌಕರರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯಗಳನ್ನು ನಿಯಂತ್ರಿಸ ಬೇಕೆಂದು ಆಗ್ರಹಿಸಿದರು.
ಪಂಚಾಯಿತಿ ಆಡಳಿತ ಮಂಡಳಿ ತೀರ್ಮಾನಿಸಿದ ಕೆಲಸವನ್ನಷ್ಟೆ ಪಂಚಾಯಿತಿ ನೌಕರರು ಮಾಡಬೇಕಾಗುತ್ತದೆ. ಇಂತಹ ಸಂದರ್ಭ ಗ್ರಾಮ ಪಂಚಾಯಿತಿ ನೌಕರರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದೆ. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸುಬ್ರಮಣಿ ಎಂಬವರ ಮೇಲೆ ತಾ.ಪಂ. ಮಾಜಿ ಅಧ್ಯಕ್ಷರೊಬ್ಬರು ಹಲ್ಲೆ ನಡೆಸಿದ್ದರು. ಆದರೆ, ಈ ಸಂಬಂಧ ದೂರು ನೀಡಲು ಮುಂದಾದ ಸುಬ್ರಮಣಿ ಅವರ ವಿರುದ್ಧವೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಟೀಕಿಸಿದರು.
ಗ್ರಾ.ಪಂ. ನೌಕರರಿಗೆ ಅನ್ಯಾಯವಾದಾಗ ಸಂಬಂಧಪಟ್ಟ ಪಿಡಿಓ, ಕಾರ್ಯದರ್ಶಿಗಳು ಪಂಚಾಯಿತಿ ವತಿಯಿಂದ ಪ್ರಕರಣ ದಾಖಲಿಸಬೇಕು. ಅನ್ಯಾಯಕ್ಕೊಳಗಾದ ಸಿಬ್ಬಂದಿಗಳಿಗೆ ಪೊಲೀಸ್ ಠಾಣೆÉಗಳಲ್ಲಿ ನ್ಯಾಯ ದೊರಕುವಂತಾಗಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಉಮೇಶ್ ಹಾಗೂ ಜಿಲ್ಲಾ ಪದಾಧಿಕಾರಿ ಅಣ್ಣಪ್ಪ ಉಪಸ್ಥಿತರಿದ್ದರು.