ಮಡಿಕೇರಿ, ಏ. 8: ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘದ ವತಿಯಿಂದ ಇಂದು ಕೋಟೆಯ ನ್ಯಾಯಾಲಯ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು.
ಕೋಟೆ ಆವರಣದಲ್ಲಿರುವ ನ್ಯಾಯಾಲಯ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ, ಕಂದಾಯ ಪರಿವೀಕ್ಷಕರ ಕಚೇರಿ, ಜನಪ್ರತಿನಿಧಿಗಳ ಕಚೇರಿ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ಅಂಗವಿಕಲರ ಕಚೇರಿ ಹೀಗೆ ಹಲವಾರು ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಇಲಾಖೆಗಳಿಗೆ ಬಹಳಷ್ಟು ಮಂದಿ ದಿನನಿತ್ಯ ಬರುತ್ತಿದ್ದು, ಪ್ರವಾಸಿಗರು ಸಹ ಅಧಿಕವಾಗಿ ಬರುತ್ತಿದ್ದಾರೆ. ರಸ್ತೆ ಮಾತ್ರ ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಕುರುಚಲು ಕಾಡುಗಳು ತುಂಬಿಹೋಗಿತ್ತು. ಇದರಿಂದಾಗಿ ಎಲ್ಲರಿಗೂ ತೊಂದರೆಗಳಾಗುತ್ತಿದ್ದು, ಗುಂಡಿ ತಪ್ಪಿಸಲು ಹೋಗಿ ಕೆಲವೊಂದು ಅವಘಡಗಳು ಸಂಭವಿಸುವದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘ ಮಡಿಕೇರಿ ಶಾಖೆಯ ನೌಕರರು ಸೇರಿ ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಎಸ್.ಟಿ. ಶಮ್ಮಿ ಪದಾಧಿಕಾರಿಗಳಾದ ಬಿ.ಎಸ್. ಜಯಪ್ಪ, ಹೆಚ್.ಎಂ. ಜಯರಾಂ, ಕೆ.ಕೆ. ಬೋಪಯ್ಯ, ವಸಂತಿ, ರಾಧಾಕೃಷ್ಣ, ನ್ಯಾಯಾಲಯದ ಸಿಬ್ಬಂದಿಗಳು ಮತ್ತಿತರರು ಭಾಗವಹಿಸಿದ್ದರು.
ಈ ವೇಳೆ ಕ್ರಿಯಾಶೀಲ ಅಭಿವೃದ್ಧಿ ಸಂಸ್ಥೆಯ ಫಾತಿಮ, ಒ.ಡಿ.ಪಿ. ಸಂಸ್ಥೆಯ ಜಯಂತಿ ಇದ್ದರು.