ಮಡಿಕೇರಿ, ಏ. 8: ಆರಂಭದಿಂದಲೇ ಒಂದಿಲ್ಲೊಂದು ಅಡೆತಡೆಗಳನ್ನೆದುರಿಸುತ್ತಾ ಬಂದು ಕೊನೆಗೂ ನಿರ್ಮಾಣ ಹಂತಕ್ಕೆ ತಲಪಿದ ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಇನ್ನೊಂದು ತೊಡಕು ಎದುರಾಗಿದೆ. ಬಸ್ ನಿಲ್ದಾಣಕ್ಕೆಂದು ಸ್ಥಳ ಸೂಕ್ತವಲ್ಲ ಎಂದು ತಕರಾರು ಎತ್ತಿದ್ದರಿಂದ ಸ್ಥಳದ ಮಣ್ಣು ಸಾಂದ್ರತಾ ಪರೀಕ್ಷೆ ನಡೆಸುವಂತಾಗಿದ್ದು, ಮೊದಲ ಪರೀಕ್ಷೆಯಲ್ಲಿ ಪಾಸಾದಂತಾಗಿದೆ.ಆದರೂ ಇನ್ನೊಂದು ಪರೀಕ್ಷೆಗೆ ಒಡ್ಡಿರುವದರಿಂದ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ.ಕಿಷ್ಕಿಂಧೆಯಿಂದ ಕೂಡಿರುವ ಖಾಸಗಿ ಬಸ್ ನಿಲ್ದಾಣ ಸ್ಥಳಾಂತರವಾಗಬೇಕೆನ್ನುವದು ಜನತೆಯ ಬಹುಕಾಲದ ಬೇಡಿಕೆಯಾಗಿದೆ. ಮಡಿಕೇರಿ ನಗರಸಭೆ ಕೂಡ ಈ ನಿಟ್ಟಿನಲ್ಲಿ ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಬಂದಿದೆ. ಇದೀಗ ಕಾವೇರಮ್ಮ ಸೋಮಣ್ಣ ಅವರು ಅಧ್ಯಕ್ಷರಾದ ಬಳಿಕ ಮತ್ತೆ ಕಾಮಗಾರಿಗೆ ಚಾಲನೆ ನೀಡಿದ್ದು, ರೂ. 4.99 ಕೋಟಿ ಮೊತ್ತದ್ದ ಕಾಮಗಾರಿಗೆ ಟೆಂಡರ್ ಕೂಡ ನೀಡಲಾಗಿದ್ದು, ಗುತ್ತಿಗೆದಾರ ನಾಗರಾಜ್ ಕಾಮಗಾರಿ ಆರಂಭಿಸಿದ್ದಾರೆ. ನಿಗದಿತ ಸ್ಥಳದಲ್ಲಿದ್ದ ಮಣ್ಣನ್ನು ತೆಗೆದು ಸುತ್ತಲೂ ಆವರಣ ಗೋಡೆ ನಿರ್ಮಾಣವಾಗುತ್ತಿದೆ.
ಮಣ್ಣು ಪರೀಕ್ಷೆ: ಆದರೆ ಶಾಸಕ ಅಪ್ಪಚ್ಚು ರಂಜನ್ ಅವರು ಮಣ್ಣನ್ನು ಪರೀಕ್ಷೆಗೆ ಕಳುಹಿಸುವಂತೆ ಆದೇಶಿಸಿದ್ದರು. ಅದರಂತೆ ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು, ಇಂಜಿನಿಯರ್‍ಗಳು ಆಗಮಿಸಿ ಮಣ್ಣು ಪರೀಕ್ಷೆ ಮಾಡಿ, ವರದಿಯನ್ನು ಸುರತ್ಕಲ್‍ನ ಇಂಜಿನಿಯರ್ ಕಾಲೇಜಿಗೆ ಸಲ್ಲಿಸಿದ್ದಾರೆ. ಸುರತ್ಕಲ್ ಕಾಲೇಜಿನವರು ಕಟ್ಟಡ
ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ವರದಿ ಸಲ್ಲಿಸಿದ್ದು, ಜೊತೆಗೆ ಎರಡನೇ ಅಭಿಪ್ರಾಯ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮತ್ತೆ ಎರಡನೇ ಅಭಿಪ್ರಾಯಕ್ಕಾಗಿ ಬೆಂಗಳೂರಿನ ನಡಾರ್ ಏಜೆನ್ಸೀಸ್ ಸಂಸ್ಥೆಗೆ ವಹಿಸಲಾಗಿದ್ದು, ಸಂಸ್ಥೆಯ ಅಭಿಯಂತರರು ಆಗಮಿಸಿ ಮಣ್ಣಿನ ಮಾದರಿಯನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. ಮುಂದಿನ ವಾರದ ಒಳಗಡೆ ಫಲಿತಾಂಶ ಬರಲಿದ್ದು, ಏನಾಗಬಹುದೆಂದು ಕುತೂಹಲಕ್ಕೆಡೆಮಾಡಿದೆ.
ಈ ನಡುವೆ ಈಗಾಗಲೇ ಗುತ್ತಿಗೆದಾರರು ಕೆಲಸ ಆರಂಭಿಸಿದ್ದು, ಕಾಮಗಾರಿಗೆ ಅವಶ್ಯವಿರುವ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಂಡಿದ್ದಾರೆ. ಕೆಲಸಗಾರರು ಕೂಡ ಕೆಲಸದಲ್ಲಿ ಮಗ್ನರಾಗಿದ್ದರು. ಆವರಣ ಗೋಡೆ ಕೆಲಸ ಬಿರುಸಿನಿಂದ ಸಾಗಿತ್ತು. ಆದರೇ, ಇದೀಗ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಮಣ್ಣಿನ ಪರೀಕ್ಷೆಯ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಒಂದು ರೀತಿಯಲ್ಲಿ ಆಡಳಿತಾರೂಢದಲ್ಲಿ ಆತಂಕ ಮನೆ ಮಾಡಿದೆ.