ಸೋಮವಾರಪೇಟೆ, ಏ. 8: ತಾಲೂಕು ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಮಹಾಸಭೆ ತಾ. 16 ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಆರ್. ಕೃಷ್ಣಪ್ಪ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮೈಸೂರಿನ ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಮೈಸೂರಿನ ಡಾ. ಎ. ಸುಧೀರ್ ಶೆಟ್ಟಿ, ಮಂಗಳೂರು ಬಂಟರ ಸಂಘದ ಸಹ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಹಾಸಭೆಯಲ್ಲಿ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ನಾರಾಯಣ ರೈ, ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ, ಇಂದಿರಾ ಪದ್ಮನಾಭ ರೈ, ಕಾರ್ತಿಕ್ ಶೆಟ್ಟಿ, ವೀರಾಜಪೇಟೆ ತಾಲೂಕು ಬಂಟರ ಸಂಘದ ಅಧ್ಯಕ್ಷ ದುಷ್ಯಂತ ರೈ, ಮಡಿಕೇರಿ ಬಂಟರ ಸಂಘದ ಅಧ್ಯಕ್ಷ ರಮೇಶ್ ರೈ, ತಾಲೂಕು ಬಂಟರ ಸಂಘದ ಗೌರವಾಧ್ಯಕ್ಷ ಡಾ. ಹರಿ ಎ. ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ವಾರ್ಷಿಕ ಮಹಾಸಭೆಯ ಸಂದರ್ಭ ಜನಾಂಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಸಾಧಕರಿಗೆ ಸನ್ಮಾನ, ಸಮಾಜ ಬಾಂಧವರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಘದ ವತಿಯಿಂದ ಚೌಡ್ಲು ಪಂಚಾಯಿತಿಯ ಗಾಂಧಿನಗರದಲ್ಲಿ ನಿವೇಶನ ಖರೀದಿಸಲಾಗಿದ್ದು, ಸದ್ಯದಲ್ಲಿಯೇ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವದು. ಸಂಘದ ಕಾರ್ಯಕ್ರಮಗಳಿಗೆ ಸಮುದಾಯ ಬಾಂಧವರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಕೃಷ್ಣಪ್ಪ ಅವರು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಖಜಾಂಚಿ ಮಂಜುನಾಥ್ ಚೌಟ, ನಿರ್ದೇಶಕರುಗಳಾದ ಪ್ರೊ. ಕರಿಯಪ್ಪ ರೈ, ಹಂಸರಾಜ್ ಶೆಟ್ಟಿ, ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.