ಕುಶಾಲನಗರ, ಏ. 8: ಐತಿಹಾಸಿಕ ಕಣಿವೆ ರಾಮಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಚಿಂತನೆ ಹರಿಸಲಾಗಿದೆ ಎಂದು ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ.
ರಾಮಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ದೇವಾಲಯ ಬಹುತೇಕ ಶಿಥಿಲಗೊಂಡಿದ್ದು, ಈ ಹಿನ್ನಲೆಯಲ್ಲಿ ದಾನಿಗಳ ಸಹಕಾರದೊಂದಿಗೆ ನೂತನ ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು. ಅಂದಾಜು ರೂ. 10 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಲಿದೆ. ಈಗಾಗಲೇ ದೇವಾಲಯದ ಆವರಣದಲ್ಲಿ ರೂ. 1.5 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಗೊಂಡಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಕಾವೇರಿ ನದಿ ತಟದಲ್ಲಿ ನಿರ್ಮಾಣಗೊಂಡಿರುವ ದೇವಾಲಯದ ಆವರಣದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಬಡಜನತೆಯ ವಿವಾಹ ಸಮಾರಂಭಗಳು ನಡೆಯುತ್ತಿವೆ. ಅಲ್ಲದೆ ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಣಿವೆ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮುಂದಿನ ಯೋಜನೆಗಳನ್ನು ರೂಪಿಸಲಾಗುವದು ಎಂದಿದ್ದಾರೆ.
ಜಾತ್ರಾ ಮಹೋತ್ಸವ ಸಂದರ್ಭ ಸುತ್ತಮುತ್ತಲಿನ 10 ಹಳ್ಳಿಗಳ ಭಕ್ತಾದಿಗಳು 7 ದಿನಗಳ ಕಾಲ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ದೇವಾಲಯದ ಆಡಳಿತ ಮಂಡಳಿ ಗೌರವಾಧ್ಯಕ್ಷರಾಗಿ ಇ.ಎಸ್. ಗಣೇಶ್, ಕಾರ್ಯಾಧ್ಯಕ್ಷರಾಗಿ ಕೆ.ಎಸ್. ಮಾಧವ, ಉಪಾಧ್ಯಕ್ಷರಾಗಿ ಕೆ.ಕೆ. ಮಂಜುನಾಥ್, ಕಾರ್ಯದರ್ಶಿಯಾಗಿ ಟಿ.ಎನ್. ಶೇಷಾಚಲ, ಸಹ ಕಾರ್ಯದರ್ಶಿ ಯಾಗಿ ಕೆ.ಎಲ್. ಮಹೇಶ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ ಅವರು, 17 ನಿರ್ದೇಶಕರುಗಳು ಹಾಗೂ ಗೌರವ ಸಲಹೆಗಾರರು, ವಿಶೇಷ ಆಹ್ವಾನಿತರು ಮತ್ತು ಸ್ಥಳೀಯ ಸ್ತ್ರೀಶಕ್ತಿ ಸಂಘಗಳು ದೇವಾಲಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ದೇವಾಲಯದ ಅಭಿವೃದ್ಧಿಗಾಗಿ ಸಲಹೆ, ಸಹಕಾರಗಳನ್ನು ನೀಡಿ ಧನ ಸಹಾಯ ನೀಡುವವರು ಕೂಡಿಗೆಯ ಕರ್ನಾಟಕ ಬ್ಯಾಂಕ್ ದೇವಾಲಯದ ಉಳಿತಾಯ ಖಾತೆ ಸಂಖ್ಯೆ 4630 ಗೆ ಸಂದಾಯ ಮಾಡುವಂತೆ ಅವರು ಕೋರಿದ್ದಾರೆ.