ಕುಶಾಲನಗರ, ಏ. 8: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಕಟ್ಟಡ ಕಾಮಗಾರಿಗೆ ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿರುವ ಸಂಘದ ನಿವೇಶನದಲ್ಲಿ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4 ಸಾವಿರ ಸದಸ್ಯರನ್ನು ಹೊಂದಿರುವ ಸಂಘ ಜಿಲ್ಲೆಯ ಸಹಕಾರಿ ಸಂಘಗಳ ಪೈಕಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಂದಾಜು ರೂ. 94 ಲಕ್ಷ ವೆಚ್ಚದಲ್ಲಿ ಮೊದಲ ಹಂತದಲ್ಲಿ ಕಟ್ಟಡದ ನೆಲ ಅಂತಸ್ತು, ಮೇಲಂತಸ್ತು ಕಾಮಗಾರಿ ಕೈಗೊಳ್ಳಲಾಗುವದು. ಸುಸಜ್ಜಿತ ಕಟ್ಟಡದ ಮೂಲಕ ಗ್ರಾಹಕರಿಗೆ, ಸದಸ್ಯರಿಗೆ ಹೆಚ್ಚಿನ ಅನುಕೂಲ ಒದಗಿಸಲಾಗುವದು. ಮುಂದಿನ ಒಂದೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವದು ಎಂದು ಮಾಹಿತಿ ನೀಡಿದರು.
ಅರ್ಚಕ ಪ್ರಸನ್ನ ಗಾಂವ್ಕರ್ ಭಟ್ ಪೂಜಾ ವಿಧಿ ನೆರವೇರಿಸಿದರು. ಸಂಘದ ನಿರ್ದೇಶಕರುಗಳಾದ ಹೆಚ್.ಎನ್. ರಾಮಚಂದ್ರ, ವಿ.ಎಸ್. ಆನಂದ ಕುಮಾರ್, ನೇತ್ರಾವತಿ, ಅಬ್ದುಲ್ ಖಾದರ್, ಕೆ.ಎನ್. ಅಶೋಕ್, ಎಂ.ಕೆ. ಗಣೇಶ್, ಸಲಹಾ ಸಮಿತಿಯ ವಿ.ಪಿ. ಶಶಿಧರ್, ಆರ್.ಕೆ. ನಾಗೇಂದ್ರಬಾಬು, ಆಲ್ಬರ್ಟ್ ಡಿಸೋಜ, ಸಂಘದ ವ್ಯವಸ್ಥಾಪಕ ಬಿ.ಬಿ. ಲೋಕೇಶ್ ಇದ್ದರು.