ಮಡಿಕೇರಿ, ಏ. 8: ಕಳೆದ ಮಾರ್ಚ್ 31 ರಂದು ಚಾಮುಂಡೇಶ್ವರಿ ನಗರದ ರವಿಯನ್ನು ಸುಳ್ಯದಿಂದ ಅಪಹರಿಸಿ, ನಗರದ ಸ್ಟೋನ್‍ಹಿಲ್ ಕಾಡಿನೊಳಗೆ ಕೊಂದು ಹೂತು ಹಾಕಿದ್ದ ಪ್ರಕರಣ ಸಂಬಂಧ, ಇಂದು ಮತ್ತೆ ಸುಳ್ಯ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದರು.ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಅಲ್ಲಿನ ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್ ಹಾಗೂ ಸಿಬ್ಬಂದಿ ಬಿಗಿಭದ್ರತೆಯಲ್ಲಿ ಕೊಲೆ ಆರೋಪಿಗಳಾದ ಡಾಲು, ಹರೀಶ್ ಮತ್ತು ಡಿಸ್ಕ್ ಅಲಿಯಾಸ್ ಪ್ರಮೋದ್‍ನನ್ನು ಮಡಿಕೇರಿಗೆ ಕರೆತಂದಿದ್ದರು.
ಕೊಲೆ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಮಾ. 31 ರಂದು ಸುಳ್ಯದ ಕೆವಿಜಿ ಆಸ್ಪತ್ರೆಯಿಂದ ರವಿಯನ್ನು ಕರೆ ತಂದಿದ್ದ ಕಾರನ್ನು (ಕೆಎ 12 ಎ 4566) ಹಾಗೂ ಆಟೋರಿಕ್ಷಾವೊಂದನ್ನು (ಕೆಎ 12 6810) ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಅಲ್ಲದೆ, ದುಷ್ಕøತ್ಯ ವೇಳೆ ಆರೋಪಿಗಳು ಧರಿಸಿದ್ದ ಬಟ್ಟೆ, ಮಾರಕಾಸ್ತ್ರಗಳೊಂದಿಗೆ ಮೊಬೈಲ್ ಗಳನ್ನು ವಶಪಡಿಸಿಕೊಂಡಿರುವ ಸುಳ್ಯ ಪೊಲೀಸರು, ಆರೋಪಿಗಳು ರವಿ ಹತ್ಯೆಗೆ ಸಂಚು
(ಮೊದಲ ಪುಟದಿಂದ) ರೂಪಿಸಿದ್ದ ಮಾಹಿತಿಯನ್ನು ಕಲೆ ಹಾಕಿಕೊಂಡು ತೆರಳಿದ್ದಾರೆ. ಈ ಸಂದರ್ಭ ಕಾರ್ಯಾಚರಣೆಗೆ ಜಿಲ್ಲಾ ಅಪರಾಧ ಪತ್ತೆ ದಳದ ಸಹಕಾರ ಪಡೆದುಕೊಂಡಿದ್ದರು. ಈಗಾಗಲೇ ಆರೋಪಿಗಳನ್ನು ಪುತ್ತೂರು ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ತನಕ ಪೊಲೀಸ್ ಕಸ್ಟಡಿಗೆ ಹೊಂದಿಕೊಂಡಿದ್ದಾರೆ.