ಗೋಣಿಕೊಪ್ಪಲು, ಏ. 8: ಸಂಘಟನಾತ್ಮಕವಾಗಿ ಬೆಳೆದಾಗ ಮಾತ್ರ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಕೊಡಗು ಜಿಲ್ಲಾ ಹೊಟೇಲು, ರೆಸಾರ್ಟ್ ಮತ್ತು ಉಪಹಾರ ಮಂದಿರಗಳ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಹೇಳಿದರು. ಗೋಣಿಕೊಪ್ಪಲಿನ ಹೊಟೇಲು ಮಾಲೀಕರನ್ನು ಸಂಘದ ಸದಸ್ಯರನ್ನಾಗಿಸುವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಈಗಾಗಲೇ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಸದಸ್ಯರಿದ್ದು, ಜಿಲ್ಲೆಯಲ್ಲಿ 2000ಕ್ಕೂ ಹೆಚ್ಚು ಹೊಟೇಲು ಮತ್ತು ರೆಸಾರ್ಟ್‍ಗಳಿದ್ದು ಎಲ್ಲರೂ ಸದಸ್ಯರಾದಲ್ಲಿ ಸಂಘಟನೆ ಬಲಾಢ್ಯವಾಗಲಿದೆ. ಉದ್ಯಮಗಳನ್ನು ಕಾನೂನಾತ್ಮಕವಾಗಿ ನೋಂದಣಿ ಗೊಳಿಸಬೇಕು ಮತ್ತು ಸರಕಾರದ ಅಗತ್ಯ ಇಲಾಖೆಗಳಲ್ಲಿ ಉದಾಹರಣೆಗೆ ಜಿಎಸ್‍ಟಿ, ಆರೋಗ್ಯ ಇಲಾಖೆ, ತೂಕ ಮತ್ತು ಅಳತೆ ಇಲಾಖೆ, ಕಾರ್ಮಿಕ ಇಲಾಖೆ, ಪಂಚಾಯಿತಿ, ಪ್ರಾವಿಡೆಂಟ್ ಫಂಡ್ ಹೀಗೆ ಹಲವಾರು ಇಲಾಖೆಗಳಲ್ಲಿ ನೋಂದಣಿಯಾಗಿ ಪರವಾನಗಿ ಪಡೆದುಕೊಂಡು ವ್ಯವಹರಿಸಿದಾಗ ಯಾವದೇ ಸಮಸ್ಯೆಗಳಿಲ್ಲದೆ ವ್ಯವಹಾರ ಮಾಡಲು ಅನುಕೂಲವಾಗುತ್ತದೆ. ಹೊಟೇಲಿಗೆ ಸಂಬಂಧಿಸಿದಂತೆ ಜಿಎಸ್‍ಟಿ, ಫುಡ್ ರೂಲ್ಸ್, ಪಿ.ಎಫ್.ಗಳ ಬಗ್ಗೆ ಕಾನೂನು, ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗೋಣಿಕೊಪ್ಪಲು ಕಾಮತ್ ಗ್ರೂಪ್‍ನ ಕೇಶವ ಕಾಮತ್ ಈಗಾಗಲೇ ಗೋಣಿಕೊಪ್ಪಲಿನಲ್ಲಿ ಹಲವಾರು ಹೊಟೇಲು ಉದ್ಯಮಿಗಳು ಸಂಘಕ್ಕೆ ಸದಸ್ಯರಾಗಿದ್ದು, ಎಲ್ಲರೂ ಸದಸ್ಯರಾಗಬೇಕೆಂದು ಕೋರಿದರು. ವೀರಾಜಪೇಟೆ ತಾಲೂಕಿನಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ಅದು ಬೆಳಕಿಗೆ ಬರದೆ ಎಲೆಮರೆಯ ಕಾಯಿಯಂತಿದೆ. ಅವುಗಳನ್ನು ಪ್ರವಾಸಿಗರಿಗೆ ಪರಿಚಯಿಸಿದರೆ ತಾಲೂಕು ಕೂಡ ಪ್ರವಾಸೋದ್ಯಮದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದರು. ವೇದಿಕೆಯಲ್ಲಿ ಸಂಘದ ಖಜಾಂಜಿ ಭಾಸ್ಕರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಗೋಣಿಕೊಪ್ಪಲು ಹೊಟೇಲು ಉದ್ಯಮಿಗಳಾದ ಎಂ.ಪಿ. ಪ್ರಮೋದ್ ಕಾಮತ್, ಪಿ.ಜಿ. ರಾಜಶೇಖರ್, ಅಶ್ರಫ್, ರಶೀದ್, ವಿವೇಕ್, ಪೊನ್ನಣ್ಣ ಸುರೇಶ್, ಶಂಷುದೀನ್, ಅಬುಬಕ್ಕರ್, ಪರಮೇಶ್, ದಿನೇಶ್, ಶ್ರೀಧರ್ ರಾವ್, ಮಾಯಿನ್, ಮೆಹರೂಫ್, ವಿವೇಕ್, ರಫೀಕ್ ಉಪಸ್ಥಿತರಿದ್ದರು. ಕೇಶವ ಕಾಮತ್ ಸ್ವಾಗತಿಸಿ, ರಾಜಶೇಖರ್ ವಂದಿಸಿದರು.