ವೀರಾಜಪೇm,É ಏ. 9: ಅಮ್ಮತ್ತಿ ಕಾರ್ಮಾಡು ಗ್ರಾಮದ ಖಾಸಗಿ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಕೆರೆಯ ಮಣ್ಣಿನೊಳಗೆ ಹುದುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಮ್ಮತ್ತಿ ಕಾರ್ಮಾಡು ಗ್ರಾಮದ ಮಂಜುನಾಥ್ ಎಂಬವರ ಮಗ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೋಹಿತ್ ಹಾಗೂ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ್ದ ಅದೇ ಗ್ರಾಮದ ಹೆಚ್.ಡಿ. ಗಣೇಶ್ ಎಂಬವರ ಮಗ ಗಗನ್ ಎಂಬಿಬ್ಬರು ಇಂದು ಸಂಜೆ 5ಗಂಟೆ ಸಮಯದಲ್ಲಿ ಕಾರ್ಮಾಡು ಗ್ರಾಮದ ಕೆರೆಯಲ್ಲಿ ಈಜಲು ಧುಮುಕಿದರು. ಈಜುತ್ತಿದ್ದ ಇಬ್ಬರಲ್ಲಿ ಒಬ್ಬ ಮುಳುಗುವ ಹಂತದಲ್ಲಿದ್ದಾಗ ಮತ್ತೊಬ್ಬ ಆತನನ್ನು ರಕ್ಷಿಸಲು ಮುಂದಾಗಿ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ವೀರಾಜಪೇಟೆ ಗ್ರಾಮಾಂತರ ಪೊಲೀಸರು ಆಕಸ್ಮಿಕ ಸಾವಿನ ಕುರಿತು ಪ್ರಕರಣ ದಾಖಲಿಸಿದ್ದಾರೆ. ಯುವಕರಿಬ್ಬರ ಸಾವಿನ ಸುದ್ದಿ ತಿಳಿಯುತ್ತಲೇ ನೂರಾರು ಮಂದಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ 10 ಗಂಟೆಯವರೆಗೂ, ಮಳೆಯ ನಡುವೆಯೂ ಜಮಾಯಿಸಿದ್ದರು.