ಮಡಿಕೇರಿ, ಏ. 9: ಕರ್ನಾಟಕ ವಿಧಾನ ಸಭೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಜನಗಣತಿ ವೇಳೆ ಜನಾಂಗದ ಸೂಚಕವಾಗಿ ‘ಕೊಡವರು’ ಎಂದು ನಮೂದಿಸಲು ಸರಕಾರದ ಗಮನ ಸೆಳೆದಿರುವ ಬಗ್ಗೆ ಸಿಎನ್ಸಿ ಹರ್ಷ ವ್ಯಕ್ತಪಡಿಸಿದೆ.
ಅಲ್ಲದೆ ದೇಶದ ಸಂಸತ್ತಿನಲ್ಲಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ಕುರಿತು ಕೇಂದ್ರ ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದು ಶ್ಲಾಘಿಸಿದೆ. ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು, ಅನೇಕ ವರ್ಷಗಳ ತಮ್ಮ ಬೇಡಿಕೆಗೆ ಧನಿಗೂಡಿಸಿರುವ ಈ ಇಬ್ಬರು ಜನಪ್ರತಿನಿಧಿಗಳ ಪ್ರಯತ್ನವನ್ನು ಶ್ಲಾಘಿಸಿದರು.
ಜಿಲ್ಲೆಯಲ್ಲಿ ಸಮಾಜಘಾತುಕ ಶಕ್ತಿಗಳು ನಕಲಿ ‘ಆಧಾರ್’ ಮೂಲಕ ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದು, ಇಂತಹ ಯತ್ನಕ್ಕೆ ಜಿಲ್ಲಾಡಳಿತ ತಡೆಯೊಡ್ಡಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಚಂಬಾಂಡ ಜನತ್ ಹಾಗೂ ಪುಲ್ಲೇರ ಕಾಳಪ್ಪ ಹಾಜರಿದ್ದರು.
ಇಂದು ಸಭೆ
ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆ ವತಿಯಿಂದ ಬುಡಕಟ್ಟು ಸ್ಥಾನಮಾನ ಹಾಗೂ ರಾಜ್ಯಾಂಗ ಖಾತ್ರಿಗೆ ಆಗ್ರಹಿಸಿ ತಾ. 10 ರಂದು (ಇಂದು) ಸಂಜೆ 4 ಗಂಟೆಗೆ ಕಿರುಗೂರಿನಲ್ಲಿ ಹಾಗೂ ತಾ. 11 ರಂದು (ನಾಳೆ) ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿ ಯೇಷನ್ನಲ್ಲಿ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ.