ಮಡಿಕೇರಿ, ಏ. 9: ನಗರದಲ್ಲಿ ಗಾಂಜಾ ಹಾವಳಿಯಿಂದ ಯುವಕರ ಜೀವನ ಹಾಳಾಗುವದರೊಂದಿಗೆ ಸಮಾಜದ ಆರೋಗ್ಯವೂ ಕೆಡುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.ಪೊಲೀಸ್ ಠಾಣೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ನಾಗರಿಕರು, ಗಾಂಜಾ ಮಾರಾಟದ ಮೂಲವನ್ನು ಪತ್ತೆ ಹಚ್ಚುವದರೊಂದಿಗೆ ಅದನ್ನು ಸೇವಿಸುವ ಯುವಜನತೆ ಬಗ್ಗೆ ನಿಗಾವಹಿಸುವಂತೆ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದರು. ನಗರದಲ್ಲಿ ಇತ್ತೀಚೆಗೆ ನಡೆದ ಎರಡು ಕೊಲೆ ಹಾಗೂ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆಯಲ್ಲೂ ಗಾಂಜಾ ಅಭ್ಯಾಸವುಳ್ಳವರು ಪಾಲ್ಗೊಂಡಿದ್ದು, ನಗರದ ಜನತೆಯಲ್ಲಿ ಭಯ ಹುಟ್ಟಿಸಿದೆ ಎಂದರು. ವೇಶ್ಯಾವಾಟಿಕೆ ವೃತ್ತಿಯಲ್ಲಿ ಹಲವರು ತೊಡಗಿದ್ದು, ಕೆಲವು ಹೋಂ ಸ್ಟೇಗಳಲ್ಲೂ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಇತ್ತೀಚಿನ ಪ್ರಕರಣವೊಂದನ್ನು ಉದಾಹರಿಸಿದ ನಾಗರಿಕರು, ಈ ಕೃತ್ಯದಲ್ಲಿ ಹಲವು ದಳ್ಳಾಳಿಗಳು ನಗರ ಮಧ್ಯೆ ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಇಸ್ಪೀಟ್ ಅಡ್ಡೆಗಳು ಎಲ್ಲೆಂದರಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಲಾಯಿತು. ನೋಂದಾಯಿತ ಹಳೆಯ ಕ್ಲಬ್‍ಗಳು ಹೊರತುಪಡಿಸಿ ಕೇವಲ 2 ಕ್ಲಬ್‍ಗಳು ಮಾತ್ರ ಇತ್ತೀಚೆಗೆ ನೋಂದಣಿ ಆಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ರಾತ್ರಿ ವೇಳೆ ಪೊಲೀಸರ ಗಸ್ತು ಸರಿ ಇಲ್ಲವೆಂದು ಹಲವರು ಅಸಮಾಧಾನ ವ್ಯಕ್ತಪಡಿಸಿ, ನಗರದಲ್ಲಿ ಇತ್ತೀಚೆಗೆ ಸ್ಟೋನ್ ಹಿಲ್ ಬಳಿ ಕನಿಷ್ಟ 4 ಗಂಟೆ ಅವಧಿ ಬಳಸಿ ಕೊಲೆ ನಡೆಸಿದ ಸಂದರ್ಭ ಪೊಲೀಸರ ಗಸ್ತು ಸರಿ ಇದ್ದಿದ್ದರೆ ಘಟನೆ ನಡೆಯುತ್ತಿರಲಿಲ್ಲ ವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕಾನೂನಿನ ವಿರುದ್ಧವಾಗಿ ಬೆಳಿಗ್ಗೆ 6.30ಕ್ಕೇ ಹಲವು ಬ್ರಾಂಡಿ ಅಂಗಡಿಗಳು ತೆರೆಯುತ್ತಿರುವ ಬಗ್ಗೆ ಜನರು
(ಮೊದಲ ಪುಟದಿಂದ) ವಿವರಣೆ ನೀಡಿದರು. ಪೊಲೀಸ್ ಅಧಿಕಾರಿಗಳ ಕಾರಿನಲ್ಲೇ ಟಿಂಟೆಡ್ ಗ್ಲಾಸ್ ಅಳವಡಿಸಲಾಗಿದ್ದು, ಹಲವು ಖಾಸಗಿ ವಾಹನಗಳೂ ಇದನ್ನೇ ಅನುಸರಿಸುತ್ತಿರುವ ಬಗ್ಗೆ ಸಭೆಯಲ್ಲಿ ಮಾತುಗಳು ಕೇಳಿಬಂದವು.
ನಗರದಲ್ಲಿ ಸುಮಾರು 175 ಆಟೋ ರಿಕ್ಷಾಗಳು ಎಂ.ಟಿ. ನಂಬರ್‍ನ ನಕಲು ಸೃಷ್ಟಿಸಿ ಓಡುತ್ತಿದ್ದು, ರಾತ್ರಿ ವೇಳೆ ಠಾಣೆಯಲ್ಲಿ ಸಹಿ ಮಾಡಿ ಬರುವ ಕೆಲವು ಚಾಲಕರು ನಂತರ ಇತರ ಚಾಲಕರಿಗೆ ಒಪ್ಪಿಸಿ ಹೋಗುತ್ತಿರುವ ಬಗ್ಗೆ ಆಟೋ ಸಂಘದವರು ಆತಂಕ ವ್ಯಕ್ತಪಡಿಸಿದರು. ಸಭೆಯಲ್ಲಿ ‘ಶಕ್ತಿ' ಸಂಪಾದಕ ಜಿ. ಚಿದ್ವಿಲಾಸ್, ‘ಕೂರ್ಗ್ ಎಕ್ಸ್‍ಪ್ರೆಸ್'ನ ಸಂಪಾದಕ ಶ್ರೀಧರ್ ನೆಲ್ಲಿತ್ತಾಯ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪ್ರಸನ್ನಭಟ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ, ಪದಾಧಿಕಾರಿ ಅರುಣ್ ಹಾಗೂ ಇತರರು ಪಾಲ್ಗೊಂಡಿದ್ದರು.