ಸೋಮವಾರಪೇಟೆ,ಏ.9: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸೋಮವಾರಪೇಟೆ ಅಕ್ಕನ ಬಳಗದ ಸದಸ್ಯರು ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕ್ರೀಡಾಕೂಟದಲ್ಲಿ ಕ್ರೀಡಾಸ್ಪೂರ್ತಿಯೊಂದಿಗೆ ಭಾಗವಹಿಸಿದರು.

ಪಟ್ಟಣದ ಅಕ್ಕಮಹಾದೇವಿ ಮಂಟಪದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಬಳಗದ ಸದಸ್ಯರು ಜೀವನದ ಜಂಜಾಟ ತೊರೆದು ಸ್ಪರ್ಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಹಿರಿಯ ಸದಸ್ಯರಿಗೆ, ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆ ನಡೆಯಿತು. ಮಹಿಳೆಯರಿಗೆ ಗ್ರಾಮೀಣ ಆಟಗಳ ಸ್ಪರ್ಧೆಗಳನ್ನು ಏರ್ಪಡಿಲಾಗಿತ್ತು. ಕವಡೆಯಾಟ, ಚೌಕಾಬಾರ, ಬ್ಯಾಂಗಲ್ ಗೇಮ್, ಪಗಡೆ ಇನ್ನಿತರ ಸ್ಪರ್ಧೆಗಳು ನಡೆದವು.

ಕಾರ್ಯಕ್ರಮವನ್ನು ಅಕ್ಕನ ಬಳಗದ ಸ್ಥಾಪಕ ಅಧ್ಯಕ್ಷೆ ದಾಕ್ಷಾಯಿಣಿ ಬಸವ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಳೆದ ಎರಡೂವರೆ ದಶಕಗಳಿಂದ ಅಕ್ಕನ ಬಳಗ ವೀರಶೈವ ಜನಾಂಗದ ಮಹಿಳೆಯರ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಿಳೆಯರ ಸಂಘಟನೆ ಕಷ್ಟವಾದರೂ, ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸಮಾಜದ ಮುಖ್ಯವಾಹಿನಿಗೆ ಬರಬಹುದು ಎಂದರು.

ಹಿರಿಯ ಸದಸ್ಯರಾದ ದಾಕ್ಷಾಯಣಿ, ಲಲಿತಮ್ಮ ವೀರಭದ್ರಪ್ಪ, ನಾಗರತ್ನ ನಟರಾಜ್, ಅರುಂದತಿ ದೇವರಾಜ್, ಬಸವರಾಜಮ್ಮ ನೀಲಕಂಠಪ್ಪ ಅವರುಗಳ ವಚನಗಾಯನ ಮನಸೂರೆಗೊಂಡಿತು.

ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್, ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ಪದಾಧಿಕಾರಿ ಗಳಾದ ಉಷಾ ತೇಜಸ್ವಿ, ಲತಾ ಮಂಜುನಾಥ್, ಸುಮಾ ಸುದೀಪ್, ಕವಿತಾ ಸಂಜಯ್ ಉಪಸ್ಥಿತರಿದ್ದರು. ಆಹಾರ ಪದಾರ್ಥಗಳ ಮಾರಾಟ ಮೇಳದಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸದಸ್ಯರು ಸವಿದರು.