ಮಡಿಕೇರಿ, ಏ. 9: ಮಾಧ್ಯಮದವರು ಬಳಸುವ ಪೆನ್ನು ಖಡ್ಗಕ್ಕಿಂತ ಹರಿತವಾಗಿರುತ್ತದೆ. ಇದನ್ನು ಅರಿತುಕೊಂಡು ಮಾಧ್ಯಮದವರು ತಮ್ಮ ಜವಾಬ್ದಾರಿ ನಿರ್ವಹಿಸಬೇಕೆಂದು ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು ಹೇಳಿದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೂರ್ನಾಡಿನ ಫ್ರೆಂಡ್ಸ್ ಕ್ರಿಕೆಟರ್ಸ್ ಸಂಯುಕ್ತಾಶ್ರಯದಲ್ಲಿ ಮೂರ್ನಾಡು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರು ಸದಾ ಒತ್ತಡದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತಿನಿತ್ಯ ವ್ಯಾಯಾಮ ಮಾಡುವದನ್ನು ರೂಢಿಸಿಕೊಳ್ಳಬೇಕು.
ಮಾಧ್ಯಮದವರ ನಡುವೆ ಬಾಂಧವ್ಯ ವೃದ್ಧಿ ಮತ್ತು ಪ್ರತಿಭೆ ಅನಾವರಣಕ್ಕೆ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಸಹಕಾರಿಯಾಗಲಿದೆ ಎಂದರು
ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಣ್ಣುವಂಡ ಎಂ. ಚಂಗಪ್ಪ, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ನಿರಂತರ ಒತ್ತಡ ಇರುತ್ತದೆ. ಕ್ರೀಡಾಕೂಟದ ಮೂಲಕ ಕಾರ್ಯ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದರು.
ಭಾರತೀಯ ಪತ್ರಿಕಾ ಒಕ್ಕೂಟ ಸದಸ್ಯ ಬಿ.ಎಸ್. ಲೋಕೇಶ್ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಕುಡೆಕಲ್ಲು ಸಂತೋಷ್, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಪಾಲ್ಗೊಂಡು ಮಾತನಾಡಿದರು.
ಸುದ್ದಿ ವಾಹಿನಿ ಕ್ಯಾಮರಮ್ಯಾನ್ ಮನೋಜ್ ಪ್ರಾರ್ಥಿಸಿ, ಜಿಲ್ಲಾ ಪತ್ರಕರ್ತ ಸಂಘ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ ಸ್ವಾಗತಿಸಿದರು. ಪ್ರವಾಸ ಸಮಿತಿ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ವಂದಿಸಿದರು. ಅಮ್ಮತ್ತಿಯ ಅಶೀಫ್, ಬಾಡಗದ ನಾಗೇಶ್ ನಿರೂಪಿಸಿದರು. ಮುಜೀಬ್ ನೇತೃತ್ವದಲ್ಲಿ ತೀರ್ಪುಗಾರರು ಜವಾಬ್ದಾರಿ ನಿರ್ವಹಿಸಿದರು.