ಸುಂಟಿಕೊಪ್ಪ, ಏ. 9: 7ನೇ ಹೊಸಕೋಟೆಯಲ್ಲಿ ಕಾಡಾನೆ ಧಾಳಿಯಿಂದ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 7ನೇ ಹೊಸಕೋಟೆಯ ಮೆಟ್ನಹಳ್ಳ ನಿವಾಸಿ ದಿವಂಗತ ಮಣಿ ಅವರ ಪತ್ನಿ ಸರೋಜ (45) ಎಂಬಾಕೆ ಇಂದು ಬೆಳಿಗ್ಗೆ 6.15ರ ಸಂದರ್ಭ ಗಂಜಿ ನೀರನ್ನು ಮನೆಯ ಹಿಂಬದಿಗೆ ಚೆಲ್ಲಲು ತೆರಳಿದ ಸಂದರ್ಭ ಪಕ್ಕದ ಈರಪ್ಪ ಅವರ ತೋಟದಲ್ಲಿಯೇ ಬೀಡುಬಿಟ್ಟಿದ್ದ ಕಾಡಾನೆಯು ಹಠತ್ತಾಗಿ ಘೀಳಿಡುತ್ತಾ ಸರೋಜ ಅವರನ್ನು ಸೊಂಡಿಲಿನಿಂದ ನೆಲಕ್ಕೆ ಬಡಿದಿದೆ. ಈ ವೇಳೆ ಸರೋಜ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣಾಧಿಕಾರಿ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದರು. ಮೃತರ ಕುಟುಂಬಕ್ಕೆ ರೂ. 2 ಲಕ್ಷ ಪರಿಹಾರದ ಚೆಕ್ ನೀಡಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಮೃತರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮೃತರ ಮನೆಗೆ ಮಾಜಿ ಅರಣ್ಯ ಸಚಿವರಾದ ಬಿ.ಎ. ಜೀವಿಯ ಅವರು ಆಗಮಿಸಿ ಸಂತಾಪ ಸೂಚಿಸಿದರು.

ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ ಸರೋಜ ಮರಣಕ್ಕೆ ಸಂತಾಪ ಸೂಚಿಸಿದರಲ್ಲದೆ; ಈ ಭಾಗದಲ್ಲಿ ಕಾಡಾನೆ ಹಾವಳಿ ಎಲ್ಲೆಮೀರಿದ್ದು ಕೂಡಲೇ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ

(ಮೊದಲ ಪುಟದಿಂದ) ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಸಿ. ಮೋಹನ್ ಒತ್ತಾಯಿಸಿದ್ದಾರೆ.

ಈ ಘಟನೆಯಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ: ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಟ್ನಹಳ್ಳ ಗ್ರಾಮ ಹಾಗೂ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಂದಗೋವೆ ಪೈಸಾರಿ ಗ್ರಾಮದಲ್ಲಿ 300ಕ್ಕೂ ಮಿಕ್ಕಿ ಕುಟುಂಬಗಳು ನೆಲೆಸಿದ್ದು, ಕಾಡಾನೆ ಉಪಟಳದಿಂದ ಸ್ಥಳೀಯರು ಭಯಭೀತಿಗೊಂಡಿದ್ದಾರೆ.

ಜನಪ್ರತಿನಿಧಿಗಳ ಅಸಾಮಾಧಾನ: ಆನೆಕಾಡು ಅರಣ್ಯ ಅಂಚಿನಲ್ಲಿ ಕಾಡಾನೆಗಳು ನಾಡಿಗೆ ಬರದಂತೆ ಅರಣ್ಯ ಇಲಾಖೆ ಹಾಗೂ ಸರಕಾರ ಕೋಟ್ಯಾಂತರ ರೂ. ವ್ಯಯಿಸಿ ಟ್ರಂಚ್ ನಿರ್ಮಿಸಿದ್ದರೂ ಅವುಗಳು ವೈಜ್ಞಾನಿಕವಾಗಿಲ್ಲದೆ ಆಹಾರ ಅರಸಿ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ಫಸಲನ್ನು ದ್ವಂಸಗೊಳಿಸುತ್ತಿದ್ದ ಕಾಡಾನೆಗಳು ಇದೀಗ ಮಾನವ ಸಂಘರ್ಷಕ್ಕೆ ಇಳಿದಿರುವದು ಆತಂಕದ ವಿಚಾರವೆಂದು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಸ್ತಾಫ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೃತ ಮಹಿಳೆಯ ಕುಟುಂಬಕ್ಕೆ ಅರಣ್ಯ ವಲಯಾಧಿಕಾರಿ ನೆಹರು ರೂ. 10 ಸಾವಿರ, ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ರೂ. 10 ಸಾವಿರ, ದಾಸಂಡ ರಮೇಶ್ ರೂ. 3 ಸಾವಿರ ನೆರವು ನೀಡಿದ್ದಾರೆ.