ಕುಶಾಲನಗರ, ಏ. 9: ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೋಪ ವ್ಯಕ್ತಪಡಿಸಿದೆ. ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಎಬಿವಿಪಿ ಘಟಕದ ಪ್ರಮುಖ ದರ್ಶನ್ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ಕಳೆದ ಹಲವು ವರ್ಷಗಳಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಕ್ರೀಡಾ ಶುಲ್ಕವಾಗಿ ರೂ. 75 ನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಕ್ರೀಡಾ ಸಾಮಗ್ರಿಗಳ ಕೊರತೆ ಎದುರಾಗಿದ್ದು ಈ ಬಗ್ಗೆ ಈಗಾಗಲೇ ಕಾಲೇಜಿನ ವಿದ್ಯಾರ್ಥಿಗಳ ತಂಡ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಶಾಸಕರು ಸಮಸ್ಯೆಗಳ ಕುರಿತಾಗಿ ಸರಕಾರದ ಗಮನಕ್ಕೆ ತಂದ ಸಂದರ್ಭ ಶಿಕ್ಷಣ ಸಚಿವರು ತಪ್ಪು ಮಾಹಿತಿ ನೀಡಿರುವದಾಗಿ ದರ್ಶನ್ ತಿಳಿಸಿದ್ದಾರೆ.
ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಿದ್ದು ಯಾವದೇ ಕ್ರೀಡಾ ಸಾಮಗ್ರಿ ಕಾಲೇಜಿಗೆ ಸರಬರಾಜಾಗಿಲ್ಲ. ಆದರೂ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಸಚಿವರಿಗೆ ತಪ್ಪು ಮಾಹಿತಿ ಒದಗಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಾಲೇಜಿನಲ್ಲಿ ವಿದ್ಯುತ್ ಸ್ಥಗಿತಗೊಂಡ ಸಂದರ್ಭ ಜನರೇಟರ್ ವ್ಯವಸ್ಥೆ ಕಲ್ಪಿಸದೆ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡುವದರೊಂದಿಗೆ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.