ಕುಶಾಲನಗರ, ಏ. 9 : ಕುಶಾಲನಗರ ಬಾರ್ ಒಂದರ ಎದುರುಗಡೆ ಹಾಡಹಗಲೇ ಎರಡು ಗುಂಪುಗಳ ನಡುವೆ ಭಾರೀ ಹೊಡೆದಾಟ ನಡೆದಿರುವದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಹಲ್ಲೆಗೊಳಗಾಗಿ ಅವಮಾನಿತ ವ್ಯಕ್ತಿಯ ಕಡೆಯವರಿಂದ ಪ್ರತೀಕಾರ ಬೆಳವಣಿಗೆಯೊಂದು ತೆರೆಮರೆಯಲ್ಲಿ ನಡೆಯುತ್ತಿರುವ ವಿಷಯ ಗೊತ್ತಾಗಿದೆ.
ಕಳೆದ ಎರಡು ದಿನಗಳ ಹಿಂದೆ ಕುಶಾಲನಗರ-ಮಡಿಕೇರಿ ರಸ್ತೆಯ ತಾವರೆಕೆರೆ ಬಳಿಯ ಬಾರ್ ಒಂದರ ಮುಂಭಾಗ ವೀರಾಜಪೇಟೆಯ ವ್ಯಕ್ತಿಯೊಬ್ಬರ ಮೇಲೆ ಸ್ಥಳೀಯರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಸಂದರ್ಭ ಮಾಹಿತಿ ತಿಳಿದ ಕುಶಾಲನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರೂ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿಲ್ಲ. ಈ ನಡುವೆ ತೀವ್ರ ಹಲ್ಲೆಗೊಳಗಾಗಿ ಅವಮಾನಿತವಾದ ವ್ಯಕ್ತಿಯ ಕಡೆಯ ತಂಡ ವೀರಾಜಪೇಟೆಯಿಂದ ಕುಶಾಲನಗರಕ್ಕೆ ಆಗಮಿಸಿದ್ದು ಹಲ್ಲೆ ನಡೆಸಿದ ಮಂದಿ ವಿರುದ್ಧ ಪ್ರತೀಕಾರ ತೀರಿಸಲು ಹೊಂಚು ಹಾಕಿ ಕುಶಾಲನಗರದಲ್ಲಿ ಠಿಕಾಣಿ ಹೂಡಿರುವ ಗುಸುಗುಸು ಮಾತ್ರ ಕೇಳಿ ಬಂದಿದೆ. ಇದೀಗ ಈ ಪ್ರಕರಣ ವಿಕೋಪಕ್ಕೆ ತೆರಳುವ ಮುನ್ನ ಕುಶಾಲನಗರ ಪೊಲೀಸರು ಸಂಬಂಧಿಸಿದ ಘಟನೆ ಬಗ್ಗೆ ಎಚ್ಚೆತ್ತು ಕೊಳ್ಳಬೇಕಿದೆ. -ಸಿಂಚು