ಮಡಿಕೇರಿ, ಏ. 9: ಇಲ್ಲಿನ ದಾಸವಾಳ ಬಳಿಯ ಶ್ರೀ ವೀರಭದ್ರ - ಮುನೀಶ್ವರ ದೇವಾಲಯ ಆವರಣದಲ್ಲಿ ಇಂದು ಕೊಡಗು ಜಿಲ್ಲಾ ಮಡಿವಾಳರ ಸಂಘದಿಂದ ಮಡಿವಾಳ ಮಾಚೀದೇವರ ಜಯಂತಿ ಆಚರಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಮಡಿವಾಳ ಮಾಚೀದೇವರು ಶೋಷಿತ ಸಮಾಜದ ದನಿಯಾಗಿ, ಅನ್ಯಾಯದ ವಿರುದ್ಧ ಸಮರವನ್ನು ಸಾರಿದವರು ಎಂದು ಸ್ಮರಿಸಿಕೊಂಡರು. ಬಸವಣ್ಣ, ದೇವರ ದಾಸೀಮಯ್ಯ, ಅಕ್ಕಮಹಾದೇವಿ, ಮಡಿವಾಳರ ಮಾಚಯ್ಯರಂತಹ ಶರಣರನ್ನು ಜನಾಂಗೀಯ ನೆಲೆಯಲ್ಲಿ ನೋಡದೆ, ಸಮಾಜದ ಆಸ್ತಿಯಂತೆ ಕಾಣಬೇಕೆಂದರಲ್ಲದೆ, ಸ್ವಾತಂತ್ರ್ಯ ದೇಶದಲ್ಲಿ ನಾವು ಭಾರತವನ್ನು ಭಾರತವಾಗಿಯೇ ಉಳಿಸಿಕೊಳ್ಳಬೇಕೆಂದು ಲೋಕೇಶ್ ಕರೆ ನೀಡಿದರು.
ದಿನದ ಮಹತ್ವ ಕುರಿತು ‘ಶಕ್ತಿ' ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಮಾತನಾಡಿ, ಮಾಚೀದೇವರ ಅನುಯಾಯಿಗಳು ಒಗ್ಗಟ್ಟು ಸಾಧಿಸುವ ಮೂಲಕ ರಾಷ್ಟ್ರದ ಮುಖ್ಯವಾಹಿನಿಗೆ ಬರಬೇಕೆಂದು ತಿಳಿಹೇಳಿದರು. ಸಂಘದ ಅಧ್ಯಕ್ಷ ನಂಜಪ್ಪ ಅವರು ಮಾತನಾಡಿ, ಜನಾಂಗದ ಒಗ್ಗಟ್ಟಿಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲರೂ ಮಡಿವಾಳ ಸಂಘದೊಂದಿಗೆ ಕೈ ಜೋಡಿಸುವಂತೆ ಸಲಹೆ ಮಾಡಿದರು.
ಸಮುದಾಯದ ಹಿರಿಯ ಸುಬ್ರಮಣಿ, ಪದಾಧಿಕಾರಿಗಳಾದ ಸುಶೀಲ ಅಪ್ಪಾಜಿ, ಪಿ.ಜಿ. ಸುಕುಮಾರ್, ಮೋಹನ್ ಕುಮಾರ್ ಮೊದಲಾದವರು ವೇದಿಕೆಯಲ್ಲಿದ್ದರು. ಪಿ.ಜಿ. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಈ ಪ್ರಯುಕ್ತ ಅನ್ನದಾನ ನಡೆಯಿತು.