ಸೋಮವಾರಪೇಟೆ,ಏ.9: ತಾಲೂಕಿನಾದ್ಯಂತ ಇದುವರೆಗೂ ಸಮರ್ಪಕ ಮಳೆಯಾಗದೇ ಇರುವ ಹಿನ್ನೆಲೆ ಕೃಷಿ, ಜನ, ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗಿದ್ದು, ಇದನ್ನು ಬಗೆಹರಿಸಿ ಮಳೆ ಕರುಣಿಸುವಂತೆ ತಾಲೂಕಿನ ಕೂತಿ ಗ್ರಾಮಸ್ಥರು ಇತಿಹಾಸ ಪ್ರಸಿದ್ದ ಪುಷ್ಪಗಿರಿ ಬೆಟ್ಟದ ಮೇಲಿರುವ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪುಷ್ಪಗಿರಿ ಬೆಟ್ಟದ ತಟದಲ್ಲಿರುವ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಕೂತಿ ಗ್ರಾಮಸ್ಥರು ನಂತರ ಬರಿಗಾಲಿನಲ್ಲಿ ಸುಮಾರು 7 ಕಿ.ಮೀ. ಬೆಟ್ಟ ಏರಿ, ಬೆಟ್ಟದ ಮೇಲಿರುವ ಶ್ರೀ ಶಾಂತಮಲ್ಲಿಕಾರ್ಜುನ, ಕೂತಿನಾಡು ಸಬ್ಬಮ್ಮ ದೇವಿ ಮತ್ತು ಕುಮಾರಳ್ಳಿ ಸಬ್ಬಮ್ಮ ದೇವಿಯ ಗುಡಿಗೆ ತೆರಳಿ ಪ್ರಾರ್ಥಿಸಿದರು.
ಸಾಧಾರಣವಾಗಿ ಪ್ರತಿ ವರ್ಷ ಯುಗಾದಿ ಹಬ್ಬದ ನಂತರ ಬೆಟ್ಟಕ್ಕೆ ತೆರಳಿ ಮಳೆ ಕರೆಯುವ ಪದ್ದತಿ ನಡೆದುಕೊಂಡು ಬಂದಿದ್ದು, ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಮಳೆ ಬೀಳದೇ ಇರುವದರಿಂದ ಮಲೆನಾಡಿನ ಪ್ರದೇಶವಾದ ಶಾಂತಳ್ಳಿ ಹೋಬಳಿಯಲ್ಲಿ ನೀರಿಗೆ ಬರ ಬಂದಿದೆ. ಈ ಹಿನ್ನೆಲೆ ಸಾಮೂಹಿಕ ವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಈ ಸಂದರ್ಭ ಗ್ರಾಮದ ಪ್ರಮುಖರಾದ ನಾಗೇಶ್, ದಿವಾಕರ್, ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.