ನಾಪೋಕ್ಲು, ಏ. 9: ಇಲ್ಲಿಗೆ ಸಮೀಪದ ಕಕ್ಕುಂದಕಾಡು ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು. ಉತ್ಸವದ ಅಂಗವಾಗಿ ಭಾನುವಾರ ದೇವರ ದರ್ಶನ ನೃತ್ಯ ಹಾಗೂ ವಿಶೇಷ ಸೇವೆಗಳು ಜರುಗಿದವು. ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವರ ನೃತ್ಯಬಲಿ ಜರುಗಿತು. ಅಧಿಕ ಸಂಖ್ಯೆಯ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯದ ಮುಖ್ಯ ಅರ್ಚಕ ರಾಘವೇಂದ್ರ ಭಟ್ ಹಾಗೂ ತಂತ್ರಿ ಕೃಷ್ಣಭಟ್ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ವಿ. ಶ್ರೀನಿವಾಸ್, ಕಾರ್ಯದರ್ಶಿ ಟಿ.ಎ. ಆನಂದಸ್ವಾಮಿ, ಖಜಾಂಚಿ ಟಿ.ಪಿ. ರಮೇಶ್ ಹಿರಿಯರಾದ ಟಿ.ಎ. ನರಸಿಂಹ, ಟಿ.ಎ. ರಾಮಯ್ಯ, ಟಿ.ಎ. ಕೃಷ್ಣಯ್ಯ, ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕ ಟಿ.ಪಿ.ರಮೇಶ್ ಇನ್ನಿತರರು ಉಪಸ್ಥಿತರಿದ್ದರು.
ಸಂಜೆ ದೇವರ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿ ಗಳೊಂದಿಗೆ ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಕಾವೇರಿ ನದಿಯಲ್ಲಿ ತೀರ್ಥಸ್ನಾನ ಕೈಗೊಳ್ಳಲಾಯಿತು.ರಾತ್ರಿ ವಸಂತಪೂಜೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.