ಮಡಿಕೇರಿ, ಏ. 9: ಸೇನಾ ಪರಂಪರೆ... ಕ್ರೀಡೆಯಲ್ಲಿ ವಿಶೇಷ ಹೆಸರು ಪಡೆದಿರುವ ಕೊಡಗು ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಚಿತ್ರರಂಗದಲ್ಲಿ ನಾಯಕಿ ನಟಿಯರಾಗಿ ಸಣ್ಣುವಂಡ ಶಶಿಕಲಾ, ನೆರವಂಡ ಪ್ರೇಮಾ, ನಿಧಿ ಸುಬ್ಬಯ್ಯ, ಉದ್ದಪ್ಪಂಡ ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ, ನಾಪಂಡ ದಿಶಾ ಪೂವಯ್ಯ ಹೀಗೆ ಹಲವರು ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಮಂದಿ ಕಿರುತೆರೆಯಲ್ಲೂ ಹೆಸರು ಮಾಡಿದ್ದಾರೆ.
ಯುವತಿಯರೇ ಈ ರಂಗದಲ್ಲಿ ಹೆಚ್ಚು ಹೆಸರು ಮಾಡಿದ್ದು, ಹಿರಿಯ ನಟ ಜೈಜಗದೀಶ್ ಬಳಿಕ ಇದೀಗ ಕೊಡಗಿನ ಯುವಕರೂ ಎಂಟ್ರಿ ಕೊಡುತ್ತಿದ್ದಾರೆ. ಉಳ್ಳಿಯಡ ಭುವನ್ ಪೊನ್ನಣ್ಣ, ಕಳ್ಳಿಚಂಡ ನಿಶಾನ್ ತಿಮ್ಮಯ್ಯ ಹಲವು ಚಿತ್ರಗಳಲ್ಲಿ ನಟಿಸಿದ್ದು ಇದೀಗ ಮತ್ತೊಬ್ಬ ಯುವಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆಗೈದಿದ್ದಾರೆ.
ಮಾರ್ಚ್ 31 ರಂದು ಬಿಡುಗಡೆಯಾದ ಅಜರಾಮರ ಚಿತ್ರದಲ್ಲಿ ಮೂಲತಃ ಕುಂಜಿಲಗೇರಿಯ ಯುವಕ ಕೂತಂಡ ಜಫ್ರಿ ಪೊನ್ನಪ್ಪ (ಚಿತ್ರ ರಂಗದಲ್ಲಿ ಹೆಸರು ತಾರಕ್ ಪೊನ್ನಪ್ಪ) ನಾಯಕನಟನಾಗಿ ನಟಿಸಿದ್ದಾರೆ. ಎಂಟೆಕ್ ಪದವಿ ಪಡೆದಿರುವ ಇವರಿಗೆ ಶಿಕ್ಷಣ ಮುಗಿದ ತಕ್ಷಣ ‘ಆಫರ್’ ಬಂದಿದ್ದು, ಚಿತ್ರರಂಗಕ್ಕೆ ನಿರ್ದೇಶಕ ರವಿ ಕಾರಂಜಿ ಅವರ ಹೊಸ ಚಿತ್ರ ಅಜರಾಮರದಲ್ಲಿ ತಾರಕ್ ಹೊಸ ಮುಖ ರೋಷನಿ ಪ್ರಕಾಶ್ ಅವರೊಂದಿಗೆ ನಟಿಸಿದ್ದಾರೆ. ವೋಲ್ವೋರಾಫ್ಟ್‍ನಲ್ಲಿ ಹೈವೇ ಟೆಕ್ನಾಲಜಿಯಲ್ಲಿ ಎಂಟೆಕ್ ಮಾಡಿರುವ ಇವರು ಸದ್ಯದ ಮಟ್ಟಿಗೆ ಚಿತ್ರರಂಗದಲ್ಲೇ ಬ್ಯುಸಿ ಆಗುತ್ತಿದ್ದಾರೆ. ಭವಿಷ್ಯದ ಯಾವದೇ ಸಂದರ್ಭಕ್ಕೆ ಆದರೂ ಶಿಕ್ಷಣ ಅತ್ಯಗತ್ಯ. ಈ ನಿಟ್ಟಿನಲ್ಲಿ ತಾವು ಮಾಸ್ಟರ್ಸ್ ಪದವಿ ಪಡೆದಿರುವದಾಗಿ ಅನಿಸಿಕೆ ವ್ಯಕ್ತಪಡಿಸಿದರು.
‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಅಜರಾಮರ ಚಿತ್ರ ಫಿಲಾಸಫಿಕಲ್ ಹಾಗೂ ಫ್ಯಾಮಿಲಿ ಎಂಟರ್‍ಟೈನ್ ಚಿತ್ರವಾಗಿದೆ. ಪ್ರತಿಭೆ ಹಾಗೂ ಪ್ರೀತಿಗೆ ಯಾವ ರೀತಿ ಉತ್ತೇಜನಕಾರಿಯಾಗುತ್ತದೆ. ಪ್ರೀತಿಸಿದ ಹುಡುಗಿಯಿಂದ ಸಿಗುವ ಪ್ರೇರೇಪಣೆ ಏನು ಎಂಬ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆಯಂತೆ. ಕೊಡಗಿನ ಯುವಕ-ಯುವತಿಯರು ಪ್ರತಿಭಾನ್ವಿತರಲ್ಲದೆ ಸ್ಪುರದ್ರೂಪಿಗಳೂ ಆಗಿದ್ದಾರೆ. ಸಿನಿಪ್ರಿಯರು ಇಲ್ಲಿನವರನ್ನು ಪಾತ್ರಧಾರಿಗಳಾಗಿ ಒಪ್ಪುತ್ತಾರೆ ಎಂಬದು ತಾರಕ್ ಅನಿಸಿಕೆ.
ಪ್ರಸ್ತುತ ಅಜರಾಮರ ಚಿತ್ರ ಉತ್ತರ ಕರ್ನಾಟಕದ ವಿವಿಧೆಡೆ ಪ್ರದರ್ಶನ ಕಾಣುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜ್‍ಕುಮಾರ್ ಚಿತ್ರ ಹೆಚ್ಚಾಗಿ ಪ್ರದರ್ಶನ ಕಾಣುತ್ತಿರುವದರಿಂದ ಈ ವಿಭಾಗದಲ್ಲಿ ಇನ್ನಷ್ಟೆ ಚಿತ್ರ ತೆರೆ ಕಾಣಬೇಕಿದೆ. ಅಜರಾಮರ ಚಿತ್ರದೊಂದಿಗೆ ತಾರಕ್‍ಗೆ ಬೇಡಿಕೆಯೂ ಬರುತ್ತಿದೆ. ಶ್ರೀನಿವಾಸ್ ಸಿದ್ದಿಪುಟ್ಟ ನಿರ್ದೇಶನದ 6 ಣo 6 ಚಿತ್ರದಲ್ಲಿ ನಾಯಕಿ ನಟಿ ಸ್ವರೂಪಿಣಿ ಅವರೊಂದಿಗೆ ಹಾಗೂ ರಾಕ್‍ಲೈನ್ ಪ್ರೊಡಕ್ಷನ್, ನಂದಕಿಶೋರ್ ನಿರ್ದೇಶನದ ಹಿರಿಯ ನಟ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸುತ್ತಿರುವ ವಿಐಪಿ ಚಿತ್ರದಲ್ಲಿಯೂ ಖಳನಾಯಕನ ಪಾತ್ರದಲ್ಲಿ ತಾರಕ್ ಅಭಿನಯಿಸಿದ್ದಾರೆ. ಈ ಎರಡು ಚಿತ್ರಗಳೂ ಸದ್ಯದಲ್ಲಿ ತೆರೆಕಾಣಲಿವೆ. ಇವರು ಬೆಂಗಳೂರಿನಲ್ಲಿ ನೆಲಸಿರುವ ಕೂತಂಡ ಪ್ರಭು ಪೊನ್ನಪ್ಪ ಹಾಗೂ ಶೋಭ (ತಾಮನೆ-ಶಾಂತೆಯಂಡ) ದಂಪತಿಯ ಪುತ್ರ.
(ಶಶಿ ಸೋಮಯ್ಯ)