ಸೋಮವಾರಪೇಟೆ, ಏ. 9: ಅರಣ್ಯದಲ್ಲಿರಬೇಕಾದ ಕಾಡಾನೆಗಳು ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದು, ಹೆದ್ದಾರಿಯಲ್ಲಿನ ಗಜ ಪಯಣದಿಂದಾಗಿ ಗ್ರಾಮಸ್ಥರು ಹೈರಾಣಾಗಿ ದ್ದಾರೆ. ಮಕ್ಕಳು, ಮಹಿಳೆಯರಾದಿ ಯಾಗಿ ಸಾರ್ವಜನಿಕರು ಜೀವ ಕೈಯಲ್ಲಿಡಿದು ಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವರ್‍ಕೊಲ್ಲಿ, ಕಾಜೂರು ಭಾಗದಲ್ಲಿರುವ ಟಾಟಾ ಕಾಫಿ ಎಸ್ಟೇಟ್ ಕಾಡಾನೆಗಳ ಆಶ್ರಯ ತಾಣವಾಗಿದ್ದು, ಯಾರ ಭಯವೂ ಇಲ್ಲದೇ ಮನಸೋಯಿಚ್ಛೆ ಸಂಚರಿಸುತ್ತಿರುವದ ರಿಂದ ಗ್ರಾಮಸ್ಥರ ನೆಮ್ಮದಿ ಕದಡಿದೆ.
ಕೋವರ್‍ಕೊಲ್ಲಿಯಿಂದ ಕಾಜೂರುವರೆಗೆ ಅರಣ್ಯಕ್ಕೆ ಒತ್ತಿಕೊಂಡಂತೆ
(ಮೊದಲ ಪುಟದಿಂದ) ಆನೆ ಕಂದಕವನ್ನು ನಿರ್ಮಿಸಲಾಗಿದ್ದು, ಇದು ಸಾರ್ವಜನಿಕರಿಗೆ ವರದಾನವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಅರಣ್ಯದಿಂದ ಕಾಡಾನೆಗಳು ಕಾಫಿ ಎಸ್ಟೇಟ್‍ಗೆ ಬಂದಿದ್ದ ಸಂದರ್ಭ ಅಡ್ಡಲಾಗಿ ಕಂದಕ ನಿರ್ಮಿಸಿರುವದರಿಂದ ಮಾಮೂಲಿ ದಾರಿಯಲ್ಲಿ ಸಂಚರಿಸಲಾಗದ ಆನೆಗಳು ಇದೀಗ ಎಲ್ಲೆಂದರಲ್ಲಿ ತಿರುಗುತ್ತಿದ್ದು ಈ ಭಾಗದ ಸಾರ್ವಜನಿಕರಿಗೆ ಜೀವ ಭಯ ತಂದೊಡ್ಡಿದೆ.
ಸೋಮವಾರಪೇಟೆ-ಮಡಿಕೇರಿ ಮುಖ್ಯರಸ್ತೆಯಲ್ಲಿಯೇ ಕಾಡಾನೆಗಳ ಕಾರಿಡಾರ್ ನಿರ್ಮಾಣವಾಗಿದ್ದು, ರಾಜಗಾಂಭೀರ್ಯದಿಂದ ಆನೆಗಳು ತಿರುಗಾಡುತ್ತಿವೆ. ಸ್ಥಳೀಯರಿಗೆ ಆನೆ ಸಂಚರಿಸುವ ಮಾರ್ಗದ ಬಗ್ಗೆ ಮಾಹಿತಿಯಿದ್ದು, ಹೊರ ಭಾಗದಿಂದ ಆಗಮಿಸುವವರಿಗೆ ಯಾವದೇ ಮಾಹಿತಿಯಿಲ್ಲದೇ ಇರುವದರಿಂದ ಆನೆ-ಮಾನವ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ.
ಮೊದಲೆಲ್ಲಾ ಕಾಜೂರು ಅರಣ್ಯದಿಂದ ಟಾಟಾ ಎಸ್ಟೇಟ್‍ಗೆ ನುಗ್ಗಿ ಆಹಾರ ಮತ್ತು ನೀರನ್ನು ಕುಡಿಯುತ್ತಿದ್ದ ಕಾಡಾನೆಗಳು ರಾತ್ರಿಯಿಂದ ಬೆಳಗ್ಗೆಯವರೆಗೂ ತೋಟದಲ್ಲಿಯೇ ಇದ್ದು, ಬೆಳಗ್ಗಿನ ಜಾವ ಅರಣ್ಯ ಸೇರುತ್ತಿದ್ದವು. ಇದೀಗ ಕೆಲವೆಡೆ ಮಾತ್ರ ಆನೆ ಕಂದಕ, ಸೋಲಾರ್ ಬೇಲಿ ಅಳವಡಿಸಿ ಉಳಿದೆಡೆ ಹಾಗೆಯೇ ಬಿಟ್ಟಿರುವದರಿಂದ ಐಗೂರಿನ ವಿಜಯನಗರ, ಕಾಜೂರು, ಯಡವಾರೆ, ಸಜ್ಜಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳು ಸಂಚರಿಸುತ್ತಿವೆ.
ಮನೆಯ ಮುಂಭಾಗಕ್ಕೆ ಆಗಮಿಸುವ ಆನೆಗಳು ಬಾಳೆ ಸೇರಿದಂತೆ ಇನ್ನಿತರ ಗಿಡಗಳನ್ನು ಧ್ವಂಸಗೊಳಿಸುತ್ತಿದ್ದು, ಮನೆ ಮಂದಿ ರಾತ್ರಿ ವೇಳೆ ಮನೆಯಿಂದ ಹೊರಬರಲೂ ಹೆದರುವಂತಾಗಿದೆ. ಇನ್ನು ಒಂಟಿ ಆನೆಯೊಂದು ಹಗಲಿನ ವೇಳೆಯಲ್ಲೂ ಗ್ರಾಮದ ರಸ್ತೆಗಳಲ್ಲಿ ನಿರಾತಂಕವಾಗಿ ಸಂಚರಿಸುತ್ತಿದೆ.
ಗ್ರಾಮಸ್ಥರಿಗೆ ಜೀವ ಭಯ ಉಂಟು ಮಾಡಿರುವ, ಕೃಷಿ ಫಸಲುಗಳನ್ನೂ ನಷ್ಟ ಮಾಡುತ್ತಿರುವ ಆನೆಗಳನ್ನು ತಕ್ಷಣ ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕು. ಆನೆಗಳ ಉಪಟಳದಿಂದ ಸಾರ್ವಜನಿಕರನ್ನು ರಕ್ಷಿಸಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕೆಂದು ಸ್ಥಳೀಯರೂ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.