ಗೋಣಿಕೊಪ್ಪಲು, ಏ.10: ಪೊನ್ನಂಪೇಟೆ ತಾಲೂಕು ರಚನೆಗೆ ಶಾಸಕರ ನೇತೃತ್ವದಲ್ಲಿ ಹೋರಾಟ ನಡೆಸಲು ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಪೊನ್ನಂಪೇಟೆ ತಾಲೂಕು ರಚನೆ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಯಿತು.ಪೊನ್ನಂಪೇಟೆ ನಾಗರಿಕ ವೇದಿಕೆ, ಪೊನ್ನಂಪೇಟೆ ತಾಲೂಕು ರಚನಾ ಸಮಿತಿ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿ ಹಾಗೂ ಸಾರ್ವಜನಿಕವಾಗಿ ಹೋರಾಟ ಮುಂದುವರಿಸಲು ಸಭೆ ನಿರ್ಧರಿಸಿತು.ಶಾಸಕರುಗಳು ಸರ್ಕಾರದ ಮಟ್ಟದಲ್ಲಿ ತಾಲೂಕು ರಚನೆಗೆ ಯೋಜನೆ ರೂಪಿಸುವದು, ಸಾರ್ವಜನಿಕರು ಹೋರಾಟ ನಡೆಸುವ ಮೂಲಕ ಸರ್ಕಾರವನ್ನು ಒತ್ತಾಯಿಸಲು ಸಲಹೆ ನೀಡಿದರು.
ಸರ್ಕಾರ ಕಡಿಮೆ ಬೌಗೋಳಿಕ ವಿಸ್ತೀರ್ಣವಿರುವ ಪ್ರದೇಶವನ್ನು ತಾಲೂಕು ಎಂದು ರಚಿಸಿ ಪೊನ್ನಂಪೇಟೆಯನ್ನು ಘೋಷಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮನವಿಗೆ ಸ್ಪಂದಿಸದಿದ್ದರೆ ಹೈಕೋರ್ಟ್ ಮೂಲಕ ಹೋರಾಡುವದಾಗಿ ಸರ್ಕಾರಕ್ಕೆ ಎಚ್ಚರಿಕೆ ನಿಡಲಾಯಿತು.
ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ,
(ಮೊದಲ ಪುಟದಿಂದ) ತಾಲೂಕು ರಚನೆಯ ಹೋರಾಟ ನ್ಯಾಯ ಸಮ್ಮತವಾಗಿದೆ. ನಾನು ಕೂಡ ಹೋರಾಟದಲ್ಲಿ ಭಾಗಿಯಾಗಲಿದ್ದೇನೆ. ಸರ್ಕಾರಕ್ಕೆ ಸುಗಮ ಆಡಳಿತ ನಡೆಸಲು ತಾಲೂಕು ರಚನೆ ಪೂರಕವಾಗಲಿದೆ. ಎಲ್ಲಾ ಸೌಕರ್ಯಗಳು ಇಲ್ಲಿ ಇರುವದರಿಂದ ತಾಲೂಕು ರಚನೆ ಘೋಷಣೆ ಶೀಘ್ರದಲ್ಲಿ ಆಗಬೇಕು ಎಂದರು.
ಮಾಜಿ ಶಾಸಕ ಅರುಣ್ ಮಾಚಯ್ಯ ಮಾತನಾಡಿ, ಸರ್ಕಾರಕ್ಕೆ ಒಂದು ತಾಲೂಕು ರಚನೆಗೆ 25 ರಿಂದ 30 ಕೋಟಿ ವೆಚ್ಚವಾಗಲಿದೆ. ಆರ್ಥಿಕ ಹೊರೆ ಎಂಬ ಕಾರಣಕ್ಕೆ ಪೊನ್ನಂಪೇಟೆ ತಾಲೂಕು ರಚನೆಗೆ ಹಿಂದೇಟು ಹಾಕಲು ಅವಕಾಶವಿಲ್ಲ. ಇಲ್ಲಿ ತಹಶೀಲ್ದಾರ್ ಹಾಗೂ ಸರ್ವೆ ಇಲಾಖೆ ಕಚೇರಿ ಹೊರತು ಎಲ್ಲಾ ಮೂಲಭೂತ ಕಟ್ಟಡಗಳು ಇರುªದರಿಂದ ಸರ್ಕಾರ ತಾಲೂಕು ಘೋಷಣೆಗೆ ಮುಂದಾಗಬೇಕು. ತಪ್ಪಿದಲ್ಲಿ ಹೈಕೋರ್ಟ್ ಮೊರೆ ಹೋಗಲು ನಾವು ಸಿದ್ದರಾಗಬೇಕಿದೆ ಎಂದರು.
ಅರಣ್ಯ ನಿಗಮ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗೆ ಹೋಲಿಸಿದರೆ ಕೊಡಗು ಅಭಿವೃದ್ಧಿಯಲ್ಲಿ ಶೂನ್ಯವಾಗಿದೆ. ಈ ನಿಟ್ಟಿನಲ್ಲಿ ಸಣ್ಣ ವಿಸ್ತೀರ್ಣದ ಮೂಲಕ ಅಭಿವೃದ್ಧಿಗೆ ಒತ್ತು ನೀಡುವ ಅವಶ್ಯಕತೆ ಇದೆ ಎಂದರು.
ಸಮಿತಿ ರಚನೆ : ಪೊನ್ನಂಪೇಟೆ ತಾಲುಕು ರಚನೆ ಸಮಿತಿಯನ್ನು ಈ ಸಂದರ್ಭ ಪುನರ್‍ರಚಿಸಲಾಯಿತು. ಶಾಸಕ ಕೆ.ಜಿ. ಬೋಪಯ್ಯ ಗೌ. ಅಧ್ಯಕ್ಷರಾಗಿ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಇವರೊಂದಿಗೆ ತಾಲೂಕು ವ್ಯಾಪ್ತಿಗೆ ಬರುವ ಜಿ.ಪಂ, ತಾ.ಪಂ. ಗ್ರಾ.ಪಂ. ಕೊಡವ ಸಮಾಜ ಹಾಗೂ ವಿವಿಧ ಜನಾಂಗಗಳ ಪ್ರಮುಖರುಗಳನ್ನು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲೆಯ ಶಾಸಕರುಗಳನ್ನು ಸೇರಿಸಿ ಸಮಿತಿ ಮೂಲಕ ಹೋರಾಟ ನಡೆಸಲು ನಿರ್ಧರಿಸಲಾಯಿತು. ಶೀಘ್ರದಲ್ಲಿ ನಿಯೋಗದ ಮೂಲಕ ಸರ್ಕಾರವನ್ನು ಒತ್ತಾಯಿಸುವುದು, ಸ್ಪಂದನೆ ದೊರೆಯದಿದ್ದಲ್ಲಿ ನ್ಯಾಯಾಲಯದ ಮೂಲಕ ಹೋರಾಟ ನಡೆಸುವ ಬಗ್ಗೆ ನಿರ್ಧರಿಸಲಾಯಿತು.
ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 48 ಗ್ರಾಮಗಳಲ್ಲಿ ಅಡಗಿರುವ 20 ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ತಾಲೂಕು ರಚನೆಗೆ ಹೋರಾಟ ಮಾಡುತ್ತಿದ್ದೇವೆ. ಕುಟ್ಟ, ಬಿರುನಾಣಿ, ನಿಟ್ಟೂರು, ಕಾರ್ಮಾಡು ಹಾಗೂ ನಾಗರಹೊಳೆ ವ್ಯಾಪ್ತಿಯ ನಾಗರಿಕರಿಗೆ ಸ್ಥಳೀಯವಾಗಿ ಆಡಳಿತ ದೊರೆಯಲು ಇದರಿಂದ ಸಹಕಾರಿಯಾಗಲಿದೆ ಎಂದರು.
ಸಭೆಯಲ್ಲಿ ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, ಉಪಾಧ್ಯಕ್ಷ ಸಿ.ಕೆ. ಸೋಮಯ್ಯ, ಜಿ.ಪಂ. ಸದಸ್ಯೆ ಶ್ರೀಜಾ ಅಚ್ಚುತ್ತನ್, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರಾ, ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ, ಬೆಳೆಗಾರ ಪುಚ್ಚಿಮಾಡ ಹರೀಶ್ ಉಪಸ್ಥಿತರಿದ್ದರು.
ಉಳುವಂಗಡ ಲೋಹಿತ್ ಪ್ರಾರ್ಥಿಸಿ, ಕಾಳಿಮಾಡ ಮೋಟಯ್ಯ ನಿರೂಪಿಸಿ, ರಾಜೀವ್ ಬೋಪಯ್ಯ ಸ್ವಾಗತಿಸಿದರು.