ಸೋಮವಾರಪೇಟೆ,ಏ.10: ಅತೀ ಹೆಚ್ಚಿನ ಜನಸಾಂದ್ರತೆ ಹೊಂದಿರುವ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೃಹತ್ ಎಸ್ಟೇಟ್ ಕಂಪೆನಿಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ಸರ್ವೆ ನಡೆಸಿ, ಒತ್ತುವರಿ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖಾಧಿಕಾರಿಗಳಿಗೆ ಶಾಸಕ ರಂಜನ್ ಸೂಚಿಸಿದರು. ಬೇಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಭಾಗ್ಯ ಮಂಜುನಾಥ್
(ಮೊದಲ ಪುಟದಿಂದ) ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು, ನಿವೇಶನಗಳ ಬೇಡಿಕೆಯಿಟ್ಟಾಗ ಶಾಸಕರು ಈ ಬಗ್ಗೆ ಪ್ರತಿಕ್ರಿಯಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್ಟೇಟ್‍ಗಳು ಒತ್ತುವರಿ ಮಾಡಿಕೊಂಡಿರುವ ಪೈಸಾರಿ ಜಾಗವನ್ನು ಗುರುತಿಸಿ, ತಕ್ಷಣ ತೆರವುಗೊಳಿಸಬೇಕು. ಅಂತಹ ಜಾಗವನ್ನು ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೇಳೂರಿನ ಬಜೆಗುಂಡಿ ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಕುಟುಂಬಗಳು ನೆಲೆಸಿದ್ದು ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಸಮರ್ಪಕ ರಸ್ತೆ, ನೀರು, ಮನೆ, ತಡೆಗೋಡೆ, ಚರಂಡಿ, ವಿದ್ಯುತ್ ಇಲ್ಲದೇ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು. ವಿಕಾಸ ಗ್ರಾಮ ಯೋಜನೆಯಡಿ ಬಜೆಗುಂಡಿ ಗ್ರಾಮಕ್ಕೆ 1 ಕೋಟಿ ಅನುದಾನ ಒದಗಿಸಲಾಗುವದು. ಈ ಅನುದಾನದಲ್ಲಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವದು ಎಂದರು. ಬಜೆಗುಂಡಿ ಹಾಗೂ ಕರ್ಕಳ್ಳಿಯಲ್ಲಿರುವ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ತಲಾ 10 ಲಕ್ಷದಂತೆ 20 ಲಕ್ಷ ಮೀಸಲಿಡಲಾಗಿದ್ದು, ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕರು ಸಭೆಗೆ ತಿಳಿಸಿದರು.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ 22.50 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು. 10 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಿರುವ ಹಿಂದೂರುದ್ರಭೂಮಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. 12.50 ಲಕ್ಷ ವೆಚ್ಚದ ನೂತನ ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿದರು. ಈ ಸಂದರ್ಭ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಶಿವಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿ ಚನ್ನಕೇಶವ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.