ನಾಪೋಕ್ಲು, ಏ. 10: ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ಸೇರಿದ ಜಮೀನು ಹಾಗೂ ದೇವರಕಾಡು ಒತ್ತುವರಿಯನ್ನು ಇಂದು ತೆರವುಗೊಳಿಸಲಾಯಿತು. ಕುಂಜಿಲ ಗ್ರಾಮದ ಸರ್ವೇ ನಂಬರ್ 30/2ರಲ್ಲಿ ಶೇಷಪ್ಪ, ಗಣೇಶ, ಪಾಲಾಕ್ಷ ಹಾಗೂ ಇತರರು ಅಕ್ರಮವಾಗಿ ಒತ್ತುವರಿ ಮಾಡಿರುವ ಜಾಗಕ್ಕೆ ಗ್ರಾಮಸ್ಥರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ಅಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್, ಕಾಫಿ ತೋಟ, ತರಕಾರಿ ಮತ್ತಿತರ ಗಿಡಗಳನ್ನು ತೆರವುಗೊಳಿಸಿ ದೇವಾಲಯದ ಅಧೀನಕ್ಕೆ ಪಡೆದುಕೊಂಡು ನಾಮಫಲಕ ಅಳವಡಿಸಿದರು.

ದೇವಾಲಯಕ್ಕೆ ಸೇರಿದ ಜಾಗ ಅಧಿಕೃತ ಆಗಿರುವ ಸರ್ವೆ ನಂಬರ್ ಹಾಗೂ ನಕಾಶೆಯಂತೆ ಕಂದಾಯ ಇಲಾಖೆಯ ನೆರವಿನೊಂದಿಗೆ ಹದ್ದುಬಸ್ತು ಮಾಡಿ ಅಂತಹ ಜಾಗವನ್ನು ದೇವಾಲಯದ ಅಧೀನಕ್ಕೆ ಪಡೆದುಕೊಡು ತಂತಿಬೇಲಿ ನಿರ್ಮಿಸಿ ನಾಮಫಲಕ ಅಳವಡಿಸಿ ಸಂರಕ್ಷಿಸುವಂತೆ ಭಕ್ತ ಜನಸಂಘ ಹಾಗೂ ಸಂಬಂದಿಸಿದವರಿಂದ ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು. ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆಯ ಪರಿವೀಕ್ಷಕ ಜಿ.ಡಿ. ರಾಮಯ್ಯ, ಗ್ರಾಮಲೆಕ್ಕಾಧಿಕಾರಿ ಅನೂಪ್‍ಸಬಾಸ್ಟಿನ್, ಜಯಲಕ್ಷ್ಮಿ ಮತ್ತು ಸಿಬ್ಬಂದಿಗಳು ಅಲ್ಲದೆ ದೇವತಕ್ಕ ಪರದಂಡ ಕಾವೇರಪ್ಪ, ಭಕ್ತ ಜನಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಾರ್ಯದರ್ಶಿ ಪರದಂಡ ಡಾಲಿ, ಪಾಂಡಂಡ ನರೇಶ್, ಕಲ್ಯಾಟಂಡ ಮುತ್ತಪ್ಪ, ಕಲ್ಯಾಟಂಡ ರಘು ತಮ್ಮಯ್ಯ, ಕಲಿಯಂಡ ಗಿರೀಶ್, ಕೋಡಿಮಣಿಯಂಡ ಸುರೇಶ್, ನಾಟೋಳಂಡ ದಿಲೀಪ್, ಪಾರುಪತ್ತೆಗಾರ ಪರದಂಡ ಪ್ರಿನ್ಸ್, ಪೇರಿಯಂಡ ಗಿರೀಶ್, ಕಲ್ಯಾಟಂಡ ಅರುಣ, ಉಮೇಶ್, ಸುರೇಶ್, ಲಾಲ, ರಘು, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. -ದುಗ್ಗಳ