ಮಡಿಕೇರಿ, ಏ.10: ಹೂಡಿಕೆ ದಾರರ ಆಕ್ಷೇಪವನ್ನು ಕಡೆಗಣಿಸಿ, ಅದಕ್ಕೆ ಪ್ರತಿಕ್ರಿಯೆ ನೀಡದೆ ಮತ್ತೆ ಹೊಸ ಅಧಿಸೂಚನೆ ಹೊರಡಿಸಿರುವ ಪರಿಸರ, ಅರಣ್ಯ ಮತ್ತು ಬದಲಿತ ಹವಾಮಾನ ಸಚಿವಾಲಯದ ತೀರ್ಮಾನವನ್ನು ಸಣ್ಣ ಬೆಳೆಗಾರರ ಸಂಘವು ಖಂಡಿಸಿದೆ. ಆಕ್ಷೇಪದ ವಿರುದ್ಧ ಏನೂ ಕ್ರಮ ಕೈಗೊಳ್ಳದೆ ಮುಂದುವರಿಯುತ್ತಿರುವದು ಜನವಿರೋಧಿ ಮತ್ತು ನೈಸರ್ಗಿಕ ನ್ಯಾಯಕ್ಕೆ ವಿರೋಧ ಎಂದು ಸಂಘದ ಪರ ನಂದಾ ಸುಬ್ಬಯ್ಯ ಹೇಳಿದ್ದಾರೆ.

ಗಡಿ ಗುರುತು ಹಾಗೂ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿ ಶಿಫಾರಸು ಮಾಡಿರುವ ಉನ್ನತ ಮಟ್ಟದ ಸಮಿತಿಯ ತೀರ್ಮಾನವು ಅವೈಜ್ಞಾನಿಕ ಹಾಗೂ ಅಪ್ರಸ್ತುತ ಎಂದು ದೂರಲಾಗಿದೆ. 2001ರ ಜನಸಂಖ್ಯೆಯನ್ನು ಆಧಾರವಾಗಿಟು ್ಟಕೊಂಡು ವರದಿ ತಯಾರಿಸಿರುವದೂ ಅವೈಜ್ಞಾನಿಕ ಎನ್ನಲಾಗಿದೆ. 2011ರ ಜನಗಣತಿಯನ್ನು ಸಮಿತಿಯು ಪರಿಗಣಿಸದಿರುವದು ನ್ಯಾಯ ಸಮ್ಮತವಲ್ಲ ಎಂದಿದ್ದಾರೆ.

ಪರಿಸರ ಸೂಕ್ಷ್ಮ ವಲಯಗಳಲ್ಲಿ ‘ಕೆಂಪು ವಿಭಾಗ' ಸೃಷ್ಟಿಯಲ್ಲಿ ಇತರ ಕೈಗಾರಿಕೆಗಳೊಂದಿಗೆ ಮೀನುಗಾರಿಕೆ ಯನ್ನೂ ಸೇರಿಸಲಾಗಿದೆ. ಇವೆಲ್ಲವನ್ನೂ ನಿಷೇಧಿಸಲು ಶಿಫಾರಸು ಮಾಡಲಾಗಿದೆ. ಕಾಫಿ ತೋಟದೊಳಗೆ ನೀರು ಸಂಸ್ಕರಣೆಗೆ ಕೆರೆಗಳನ್ನು ರಚಿಸಿ ಮೀನು ಕೃಷಿಯನ್ನೂ ಕೈಗೊಳ್ಳುತ್ತಿದ್ದು, ಮೇಲಿನ ಶಿಫಾರಸು ಮಾರಕವಾಗಿದೆ. ‘ಕೆಂಪು ವಿಭಾಗ'ದ ಪಟ್ಟಿಯನ್ನು ಸರಕಾರ ಮರುಪರಿಶೀಲನೆ ಮಾಡಬೇಕು. ಕೆಂಪು ವಿಭಾಗದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿರುವದು ಅಸ್ಪಷ್ಟ ಹಾಗೂ ಪ್ರಶ್ನಾರ್ಹವಾಗಿದೆ. ಹತ್ತು ಕಿಲೋಮೀಟರ್ ಒಳಗಿನ ಚಟುವಟಿಕೆಗಳನ್ನು ನಿಯಂತ್ರಿಸಲು ಯತ್ನಿಸಿದಲ್ಲಿ ಕುಶಾಲನಗರದ ಕಾಫಿ ಸಂಸ್ಕರಣಾ ಕೇಂದ್ರಗಳಿಗೂ ಹೊಡೆತ ಬೀಳಲಿದೆ. ಮರಳು ಮತ್ತು ಗಣಿಗಾರಿಕೆ ನಿಯಂತ್ರಣದಿಂದ ಸರ್ಕಾರೀ ಯೋಜನೆಗಳು, ಕಟ್ಟಡ ನಿರ್ಮಾಣಗಳೂ ನೆನೆಗುದಿಗೆ ಬೀಳಲಿವೆ. ದೇಶದ ಇತರೆಡೆ ಇಲ್ಲದ ಕಾನೂನನ್ನು ಪಶ್ಚಿಮ ಘಟ್ಟದ ಜನರ ಮೇಲೆ ಹೇರುವದು ನ್ಯಾಯ ಸಮ್ಮತವಲ್ಲ ಎಂದು ಸಂಘವು ಸರ್ಕಾರಕ್ಕೆ ಬರೆದಿರುವ ಆಕ್ಷೇಪದಲ್ಲಿ ಹೇಳಿದೆ. ಕೊಡಗಿನಲ್ಲಿ 1003 ಚ.ಕಿ.ಮೀ. ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಪ್ರಕೃತಿಗೆ ಪೂರಕ ಚಟುವಟಿಕೆಯಲ್ಲಿ ತೊಡಗಲಾಗಿದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಎಲ್ಲಾ ಬೆಳೆಗಾರರೂ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಕೊಡಗಿನಲ್ಲಿ ಇತರೆಡೆಯಂತೆ ಗಣಿಗಾರಿಕೆ, ವಿದ್ಯುತ್ ಸ್ಥಾವರ ಗಳಂತಹ ಪ್ರಕೃತಿ ವಿರೋಧಿ ಚಟುವಟಿಕೆಗಳಿರದಿದ್ದರೂ ಇತರೆಡೆಯ ಪರಿಸ್ಥಿತಿ ಅವಲೋಕಿಸಿ ಇಲ್ಲಿಯೂ ಕಾನೂನು ಹೇರುವದು ಅವೈಜ್ಞಾನಿಕ ಎಂದು ಸಣ್ಣ ಬೆಳೆಗಾರರ ಸಂಘ ವಾದಿಸಿದೆ.

ವರದಿ ಅನುಷ್ಠಾನಕ್ಕೆ ಮುಂಚೆ ಎನ್.ಜಿ.ಓ.ಗಳನ್ನು ಹೊರತಾಗಿ, ಜಿಲ್ಲೆಯ ತಳವರ್ಗದಿಂದ ಮೇಲಿನವರೆಗಿನ ಸದಸ್ಯರುಗಳನ್ನು ಒಳಗೊಂಡ ಹೊಸ ಸಮಿತಿ ರಚಿಸಿ, ಹಿಂದಿನ ವರದಿಗಳ ಪುನರವ ಲೋಕನ ಮತ್ತು ವಾಸ್ತವಕ್ಕೆ ಹತ್ತಿರವಾದ ವರದಿ ತಯಾರಿಸಿ ಪರಿಗಣಿಸುವಂತೆ ಸಮಿತಿ ಕೋರಿದೆ.

ಮೇಲಿನ ಅಂಶಗಳನ್ನೊಳ ಗೊಂಡ ಮನವಿ ಪತ್ರವನ್ನು ನವದೆಹಲಿಯ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯ ಕಾರ್ಯದರ್ಶಿಗಳಿಗೆ ಕಳುಹಿಸಲು ತೀರ್ಮಾನಿಸಲಾಗಿದೆ.