ಪೊನ್ನಂಪೇಟೆ, ಏ. 10: ವೀರಾಜಪೇಟೆ ತಾಲೂಕು ಬರಪೀಡಿತವೆಂದು ಘೋಷಣೆಯಾಗಿರುವದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆಯಾಗಲಿದೆ. ತಾಲೂಕಿನ ಯಾವದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಸ್ಪಂದಿಸುವಂತಾಗಬೇಕು. ಈ ಹಿನೆÀ್ನಲೆಯಲ್ಲಿ ವೀರಾಜಪೇಟೆ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುವಂತಾಗಬೇಕು ಎಂದು ವೀರಾಜಪೇಟೆ ತಾ.ಪಂ. ಸಾಮಾನ್ಯ ಸಭೆ ಒಕ್ಕೊರಲಿನ ತೀರ್ಮಾನ ಕೈಗೊಂಡಿದೆ.
ಪೊನ್ನಂಪೇಟೆಯ ತಾ.ಪಂ. ಆವರಣದಲ್ಲಿರುವ ಸಾಮಥ್ರ್ಯ ಸೌಧದ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಸದಸ್ಯರೆಲ್ಲರೂ ಅಂಗೀಕರಿಸಿದರು.
ವಿಷಯ ಪ್ರಸ್ತಾಪಿಸಿ ಮಾತನಾಡಿದ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಬರಪೀಡಿತ ತಾಲೂಕಾದ್ದರಿಂದ ಕುಡಿಯುವ ನೀರಿನ ಯೋಜನೆಗಾಗಿ ವಿಶೇಷ ಅನುದಾನವನ್ನು ಮೀಸಲಿಡುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸುವ ನಿರ್ಣಯವೊಂದನ್ನು ತಾ.ಪಂ. ಅಂಗೀಕರಿಸಬೇಕಿದೆ ಎಂದಾಗ ಸಭೆ ಪೂರ್ಣವಾಗಿ ಒಪ್ಪಿಗೆ ಸೂಚಿಸಿತು.
ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಜಾಗ ಮತ್ತಿತರ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಮ್ಮೆ ವಿವಾದ ಎದುರಾಗಿ ಸಿಬ್ಬಂದಿಗಳ ಮತ್ತು ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ಘಟನೆಗಳು ಎದುರಾಗುತ್ತದೆ
(ಮೊದಲ ಪುಟದಿಂದ) ಎಂದು ಸಭೆಯಲ್ಲಿದ್ದ ಜಿ.ಪಂ. ಕುಡಿಯುವ ನೀರಿನ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಭೆಯ ಗಮನ ಸೆಳೆದರು. ಈ ವೇಳೆ ಪ್ರತಿಕ್ರಿಯಿಸಿದ ಕೆಲ ಸದಸ್ಯರು ಅಂತಹ ಸಂದರ್ಭ ಎದುರಾದಾಗ ಜನಪ್ರತಿನಿಧಿಗಳಾದ ತಮಗೆ ತಿಳಿಸಿದಾಗ ಕೂಡಲೇ ನೆರವಿಗೆ ಧಾವಿಸುವದಾಗಿ ಭರವಸೆ ನೀಡಿದರು.
ಅನುಮೋದನೆ ಕಡ್ಡಾಯ : ತಾ.ಪಂ. ವ್ಯಾಪ್ತಿಗೊಳಪಡುವ ಸಂಬಂಧಿಸಿದ ಇಲಾಖೆ ವತಿಯಿಂದ ಕೈಗೊಳ್ಳಲಾಗುವ ಯಾವದೇ ಯೋಜನೆಗೆ ತಯಾರಿಸಲ್ಪಡುವ ಕ್ರಿಯಾಯೋಜನೆಗೆ ತಾ.ಪಂ. ಸಾಮಾನ್ಯ ಸಭೆಯ ಅನುಮೋದನೆ ಕಡ್ಡಾಯಗೊಳಿಸಬೇಕು ಎಂದು ಸದಸ್ಯ ಅಜಿತ್ ಕರುಂಬಯ್ಯ ಅವರು ತಾ.ಪಂ. ಸದಸ್ಯರ ಪರವಾಗಿ ಸಭೆಯಲ್ಲಿ ಒತ್ತಾಯಿಸಿದಾಗ ಎಲ್ಲಾ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದರು.
ಕೆರೆ ನಿರ್ಮಿಸಲು ಅನುಮತಿಯೇಕೆ? : ಬಿರುನಾಣಿ ವ್ಯಾಪ್ತಿಯಲ್ಲಿ ಕೆಲವರು ತಮ್ಮ ಅಧೀನದಲ್ಲಿರುವ ಖಾಸಗಿ ಜಾಗಗಳಲ್ಲಿ ಕೆರೆ ನಿರ್ಮಿಸಲು ಮುಂದಾದಾಗ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸಭೆಯಲ್ಲಿದ್ದ ಶ್ರೀಮಂಗಲ ವನ್ಯಜೀವಿ ವಿಭಾಗದ ಸಹಾಯಕ ವಲಯ ಅರಣ್ಯಾಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಖಾಸಗಿ ಜಾಗದಲ್ಲಿ ಕೆರೆ ನಿರ್ಮಿಸುವಾಗ ಅಲ್ಲಿಗೆ ತೆರಳಿ ಅದನ್ನು ತಡೆಯಿಡಿಯುವ ಅಧಿಕಾರ ನಿಮಗಿದೆಯೇ? ಖಾಸಗಿ ಜಾಗದಲ್ಲಿ ಕೆರೆ ನಿರ್ಮಿಸುವಾಗ ನೀವು ಅಲ್ಲಿಗೆ ತೆರಳಿ ಕೆಲಸ ನಿಲ್ಲಿಸಲು ಹೇಳಲು ನಿವ್ಯಾರು ಎಂದು ಖಾರವಾಗಿ ಪ್ರಶ್ನಿಸಿದರು. ಶ್ರೀಮಂಗಲ ವನ್ಯ ಜೀವಿ ವಲಯ ವ್ಯಾಪ್ತಿಯಲ್ಲಿ ಆನೆ ನಾಡಿಗೆ ಬರದಂತೆ ತಡೆಯಲು ಇಲಾಖೆ ವತಿಯಿಂದ ಆನೆ ಕಂದಕಗಳನ್ನು ತೋಡಲಾಗುತ್ತಿದೆ. ಈ ಯೋಜನೆಯಲ್ಲೂ ವ್ಯಾಪಕ ಅಕ್ರಮ ನಡೆಯುತ್ತಿದೆ. ಕಂದಕದ ಗುಂಡಿ 10 ಅಡಿ ಆಳವಿರಬೇಕೆಂದು ಕ್ರಿಯಾಯೋಜನೆಯಲ್ಲಿದ್ದರೂ ಅದನ್ನು ಇಲಾಖೆ ಪಾಲಿಸುತ್ತಿಲ್ಲ. ಈ ಬಗ್ಗೆ ಕೆಲ ಗ್ರಾಮಸ್ಥರು ಆಕ್ಷೇಪಣೆ ಎತ್ತಿ ಸಂಬಂಧಿಸಿದವರಿಗೆ ದೂರು ನೀಡಿದರೆ ಕೂಡಲೆ ದೂರುದಾರರ ಮನೆಗೆ ತೆರಳುವ ಶ್ರೀಮಂಗಲ ವನ್ಯ ಜೀವಿ ಅರಣ್ಯ ಅಧಿಕಾರಿಗಳು ಕಾಮಗಾರಿ ಸಮರ್ಪಕವಾಗಿದೆ ಎಂದು ಬರೆದು ಸಹಿ ಮಾಡಿ ಕೊಡಿ ಎಂದು ಒತ್ತಾಯಿಸಲಾಗುತ್ತಿದೆ ಎಂದು ಸಭೆಯಲ್ಲಿ ಉಪಾಧ್ಯಕ್ಷ ಚಲನ್ ಕುಮಾರ್ ಗಂಭೀರ ಆರೋಪ ಮಾಡಿದರು. ಮತ್ತೆ ಅರಣ್ಯಾಧಿಕಾರಿಗಳ ವಿರುದ್ಧ ಸಭೆಯಲ್ಲಿ ಕಿಡಿಕಾರಿದ ಅವರು, ‘ಖಾಸಗಿ ಜಾಗದ ವಿಚಾರ ನಿಮಗೆ ಬೇಡ. ನಿಮ್ಮ ಇಲಾಖೆ ಕೆಲಸವನ್ನು ಜವಾಬ್ದಾರಿಯಿಂದ ಮಾಡಿ. ಕರ್ನಾಟಕ ಕೇರಳ ರಾಜ್ಯ ಗಡಿಯ ಅರಣ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳನ್ನು ಮೊದಲು ತಡೆಗಟ್ಟಿ. ಅರಣ್ಯಾಧಿಕಾರಿಗಳು ಹಣ ಪಡೆದು ಅರಣ್ಯದ ಮೂಲಕ ದನಗಳನ್ನು ಕೇರಳಕ್ಕೆ ಸಾಗಿಸಲಾಗುತ್ತಿದೆ’ ಎಂದು ಆರೋಪಗಳ ಪಟ್ಟಿ ಮಾಡಿದರಲ್ಲದೇ, ‘ಈ ಅರಣ್ಯಾಧಿಕಾರಿಗಳು ಕೆಲ ಪರಿಸರವಾದಿಗಳ ಕೈಗೊಂಬೆಗಳಂತೆ ವರ್ತಿಸುವದನ್ನು ಬಿಟ್ಟು ಸರಕಾರದ ಕೆಲಸವನ್ನು ನಿಯತ್ತಿನಿಂದ ಮಾಡಲು ಕಲಿಯಿರಿ. ಇದನ್ನು ನಿಮ್ಮ ಆರ್.ಎಫ್.ಒ.ಗೂ ಹೇಳಿ’ ಎಂದು ಸಭೆಯಲ್ಲಿದ್ದ ಎ.ಆರ್.ಎಫ್.ಒ.ಗೆ ತಾಕೀತು ಮಾಡಿದರು.
ಅಕ್ರಮ ಆಧಾರ್ ದಂಧೆ-ನಾಲ್ವರ ಬಂಧನ: ಇತ್ತೀಚೆಗೆ ತಿತಿಮತಿ ಸಮೀಪದ ತಾರಿಕಟ್ಟೆಯಲ್ಲಿ ಬೆಳಕಿಗೆ ಬಂದ ಅಕ್ರಮ ಆಧಾರ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪರವಾಗಿ ಸಭೆಗೆ ಹಾಜರಾಗಿದ್ದ ಪೊನ್ನಂಪೇಟೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಜಯರಾಮ್ ಮಾಹಿತಿ ನೀಡಿದರು.
ಈಗಾಗಲೇ ಪ್ರಮುಖ ಆರೋಪಿಯೆಂದು ಖಲೀಂಮುಲ್ಲಾ ಎಂಬಾತನನ್ನು ಗುರುತಿಸಲಾಗಿದೆ. ಈತ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಈತನನ್ನು ಕೂಡಲೇ ಬಂಧಿಸಲಾಗು ವದು ಎಂದು ಸಭೆಗೆ ಭರವಸೆ ನೀಡಿದರು. ಇದಕ್ಕೂ ಮೊದಲು ಮಾತನಾಡಿದ ಸದಸ್ಯ ಅಜಿತ್ ಕರುಂಬಯ್ಯ, ಅಕ್ರಮ ಆಧಾರ್ ದಂಧೆಯನ್ನು ಬೇಧಿಸುವಲ್ಲಿ ಪೊನ್ನಂಪೇಟೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಜಯರಾಮ್ ಅವರು ಕರ್ತವ್ಯ ನಿಷ್ಠೆ ಮೆರೆದಿದ್ದು, ಅವರನ್ನು ತಾ.ಪಂ. ಪರವಾಗಿ ಅಭಿನಂದಿಸು ವದಾಗಿ ತಿಳಿಸಿದರು. ಈ ಜಾಲವನ್ನು ಪೂರ್ಣವಾಗಿ ಬೇಧಿಸಬೇಕು. ದಂಧೆ ನಡೆಸಲಾಗುತ್ತಿದ್ದ ಮನೆಯ ಮಾಲೀಕರ ಬಗ್ಗೆ ಮಾಹಿತಿ ಕಲೆಹಾಕಿ ಅವರ ವಿರುದ್ದವೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಇದೀಗ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಘೋಷಣೆಯಾಗಿದ್ದು, ಸಾಕಷ್ಟು ವಿದ್ಯಾರ್ಥಿಗಳು ದ್ವಿಚಕ್ರ ವಾಹನವನ್ನು ಮಿತಿ ಮೀರಿದ ವೇಗದಲ್ಲಿ ಚಾಲಿಸುತ್ತಾ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯೆ ಮೂಕಳೇರ ಆಶಾ ಪ್ರಕಾಶ್ ಒತ್ತಾಯಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಜಯರಾಮ್, ಇದನ್ನು ಗಂಭೀರವಾಗಿ ಪರಿಗಣಿಸಲಾಗುವದು ಎಂದು ಹೇಳಿದರು.
ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಅಗತ್ಯ : ಪ್ರತಿ ಸಭೆಯಲ್ಲಿ ಚರ್ಚಿತವಾಗುವ ಅಕ್ರಮ ಮದ್ಯ ಮಾರಾಟ ದಂಧೆ ವಿಚಾರ ಎಂದಿನಂತೆ ಇಂದಿನ ಸಭೆಯಲ್ಲೂ ಪ್ರತಿದ್ವನಿಸಿತು. ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಮಾಳೇಟಿರ ಬೋಪಣ್ಣ, ಈ ದಂಧೆ ವಿರುದ್ದ ಕ್ರಮಕ್ಕೆ ಎಷ್ಟೇ ಒತ್ತಾಯಿಸಿದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಇನ್ನಾದರೂ ಅಬಕಾರಿ ಇಲಾಖೆ ತನ್ನ ಇಚ್ಚಾಶಕ್ತಿಯನ್ನು ಪ್ರದರ್ಶಿಸಿ ಈ ಅಕ್ರಮ ದಂಧೆಗೆ ಕಡಿವಾಣ ಹಾಕಲೇಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಭೆಯಲ್ಲಿ ಮೌನವಾಗಿ ಕುಳಿತಿರುತ್ತಿದ್ದ ಕೆಲ ಮಹಿಳಾ ಸದಸ್ಯರು ತಮ್ಮ ಮೌನ ಮುರಿದು ತಾಲೂಕಿನ ಬಹುತೇಕ ಭಾಗಗಳಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಈ ದಂಧೆಯನ್ನು ಮಟ್ಟ ಹಾಕಬೇಕು ಎಂದು ಹೇಳಿದರು. ಈ ವೇಳೆ ಸಮಾಜಾಯಿಷಿಕೆ ನೀಡಿದ ಅಬಕಾರಿ ನಿರೀಕ್ಷಕರು ಅಕ್ರಮ ಮದ್ಯ ಮಾರಾಟ ದಂಧೆ ವಿರುದ್ದ ದಾಳಿ ನಡೆಸುತ್ತಿರುವದಾಗಿ ಹೇಳಿದರು.
ತಾಲೂಕಿನ ಬಹುತೇಕ ಭಾಗದ ಕೆಲವು ದಿನಸಿ ಅಂಗಡಿ, ಕೆಲ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಅಬಕಾರಿ ಇಲಾಖೆಯ ಸಹಯೋಗದಲ್ಲೇ ನಡೆಯುತ್ತಿದೆ ಎಂದು ನೇರವಾಗಿ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಕೆಲ ಮಹಿಳಾ ಸದಸ್ಯರು, ಕೆಲ ಅಂಗಡಿಗಳಲ್ಲಿ ಅಕ್ಕಿ ಚೀಲದೊಳಗೆ ಮದ್ಯದ ಬಾಟಲ್ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಮದ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಬೋಪಣ್ಣ, ಅಕ್ರಮ ದಂಧೆ ವಿರುದ್ಧ ಧಾಳಿ ನಡೆಸಲು ತೆರಳುವಾಗ ಇಲಾಖಾ ವಾಹನವನ್ನು ಬಿಟ್ಟು ಬೇರೆ ವಾಹನದಲ್ಲಿ ತೆರಳಿ ಧಾಳಿ ನಡೆಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಕಿರಣ್ ರಾಯ್ ಪಡ್ನೇಕರ್ ಸೇರಿದಂತೆ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
ಚಿತ್ರ ವರದಿ-ರಫೀಕ್ ತೂಚಮಕೇರಿ