ಮಡಿಕೇರಿ, ಏ. 10: ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಇಲ್ಲಿನ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಗಣಪತಿಯ ಸಾವಿನ ಕುರಿತು ವಿಚಾರಣೆಯನ್ನು ತಾ. 15ಕ್ಕೆ ಮುಂದೂಡಲಾಗಿದೆ.ಇಲ್ಲಿನ ಜೆಎಂಎಫ್‍ಸಿ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರ ಮುಂದೆ, ಮೃತರ ಸಹೋದರ ಮಾಚಯ್ಯ ಅವರು ಖಾಸಗಿ ಮೊಕದ್ದಮೆ ನಮೂದಿಸಲು ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ. ಉಚ್ಛ ನ್ಯಾಯಾಲಯದ ವಕೀಲ ಪವನ್ ಚಂದ್ರಶೇಖರ್ ಶೆಟ್ಟಿ ಮೂಲಕ ಮೊಕದ್ದಮೆ ದಾಖಲಿಸಲು ಮಾಚಯ್ಯ ಕಾಲಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ತಾ. 15ಕ್ಕೆ ನಿಗದಿಗೊಳಿಸಲಾಗಿದೆ. ತಮ್ಮನ್ನು ದೂರುದಾರರನ್ನಾಗಿ ಪರಿಗಣಿಸಬೇಕೆಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದು, ಈ ಸಂಬಂಧ ತಾ. 10 ರಂದು ದಾಖಲೆಗಳನ್ನು ಒದಗಿಸುವಂತೆ ನ್ಯಾಯಾಲಯ ನೀಡಿದ ನೋಟೀಸ್ ಶುಕ್ರವಾರ ಸಿಕ್ಕಿದೆ. ಕಾಲಾವಕಾಶ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗಿ ತಾ. 15ರವರೆಗೆ ಸಮಯಾವಕಾಶ ಕೋರಿದ್ದು, ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ತಾ. 15ರವರೆಗೆ ಸಮಯವಕಾಶ ನೀಡಿದ್ದಾರೆ. ತಾ. 15 ರಂದು ವಕೀಲ ಪವನ್ ಚಂದ್ರಶೇಖರ್ ಶೆಟ್ಟಿ ಆಗಮಿಸಲಿದ್ದು, ದಾಖಲೆ ಸಹಿತ ಸಲ್ಲಿಸಲಾಗುವದೆಂದು ಮೃತ ಗಣಪತಿ ಸಹೋದರ ಮಾಚಯ್ಯ ಹೇಳಿದರು.

ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಯಾತಕ್ಕಾಗಿ ಈ ರೀತಿ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ. ತನಿಖಾ ಸಮಿತಿಯವರು ತನ್ನೊಂದಿಗೆ ಮಾಹಿತಿ ಕೋರಿದ್ದರು. ಆದರೆ ಪ್ರಕರಣ ನ್ಯಾಯಾಲಯದಲ್ಲಿರುವದರಿಂದ ಯಾವದೇ ಮಾಹಿತಿ ನೀಡಲಾಗುವದಿಲ್ಲವೆಂದು ಹೇಳಿರುವದಾಗಿ ಮಾಚಯ್ಯ ತಿಳಿಸಿದರು. ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಕೂಡ ನಡೆಯುತ್ತಿದೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುವದಾಗಿ ಅವರು ಹೇಳಿದರು.