ಮಡಿಕೇರಿ, ಏ. 10: ತಿತಿಮತಿ ಬಳಿ ತಾರಿಕಟ್ಟೆಯ ಮನೆಯೊಂದರಲ್ಲಿ ನಕಲಿ ಆಧಾರ್ ಕಾರ್ಡ್‍ಗಳನ್ನು ಬಾಂಗ್ಲಾ ವಲಸಿಗರೆಂಬ ಶಂಕೆ ಹೊಂದಿರುವ, ಅಸ್ಸಾಂ ಮೂಲದ ಕಾರ್ಮಿಕರಿಗೆ ನೀಡುತ್ತಿದ್ದ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಖಲೀಂವುಲ್ಲಾ ಎಂಬಾತನ ಜಾಡು ಹಿಡಿದಿರುವ ಪೊಲೀಸರಿಗೆ ಇಂದು ಆರೋಪಿಯ ತಾಯಿಯ ಮಾಹಿತಿ ಲಭಿಸಿದೆ. ಈಕೆ ಸುಂಟಿಕೊಪ್ಪದ ತೋಟವೊಂದಕ್ಕೆ ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದ ವೇಳೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಸುಂಟಿಕೊಪ್ಪ ಠಾಣಾಧಿಕಾರಿ ಅನುಪ್ ಮಾದಪ್ಪ ಹಾಗೂ ಪೊನ್ನಂಪೇಟೆ ಠಾಣಾಧಿಕಾರಿ ಜಯರಾಂ ಮತ್ತು ಸಿಬ್ಬಂದಿ ನಕಲಿ ಆಧಾರ್ ಜಾಲದ ಹಿಂದಿರುವ ಖಲೀಂವುಲ್ಲ ಹಾಗೂ ಇತರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವದಾಗಿ ತಿಳಿದು ಬಂದಿದೆ. ಹಾಸನ ಜಿಲ್ಲಾಧಿಕಾರಿ ಚೈತ್ರ ಅವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ,

(ಮೊದಲ ಪುಟದಿಂದ) ಅಲ್ಲಿನ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಕೆ. ಜಾನಕಿ ಹಾಗೂ ಉಪವಿಭಾಗಾಧಿಕಾರಿಗಳಿಗೆ ನಿರ್ದೇಶಿಸಿ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದಾರೆ.

ಅಲ್ಲದೆ ಹಾಸನ ಜಿಲ್ಲೆಯ ಆಧಾರ್ ಏಜೆನ್ಸಿ ಹೊಂದಿರುವ ಮಂಜುನಾಥ ಎಂಬವರು ಕರ್ನಾಟಕದ ಮುಖ್ಯಸ್ಥರಿಗೆ ದೂರು ನೀಡುವದರೊಂದಿಗೆ, ಬಾಂಗ್ಲಾ ವಲಸಿಗರೆಂಬ ಅನುಮಾನವಿರುವ ಮಂದಿಗೆ ನಕಲಿ ಆಧಾರ್ ಸಿದ್ಧಗೊಳಿಸಲು ಮುಂದಾಗಿರುವ ಕುರಿತು ಸಮಗ್ರ ತನಿಖೆ ನಡೆಸಿ ನಕಲಿ ಆಧಾರ್ ಕಾರ್ಡ್‍ಗಳು ನೀಡಲ್ಪಟ್ಟಿದ್ದರೆ ಎಲ್ಲವನ್ನು ರದ್ದುಗೊಳಿಸಲು ಅಗತ್ಯ ಕ್ರಮಕ್ಕೆ ಕೋರಿರುವದಾಗಿ ಗೊತ್ತಾಗಿದೆ. ರಾಜಕೀಯ ಕರಿನೆರಳು: ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಮಿಕರ ಸೋಗಿನಲ್ಲಿ ನೆಲೆಸಿರುವ ಅಸ್ಸಾಂ ಮೂಲದವರೆಂದು ಹೇಳಿಕೊಳ್ಳುತ್ತಿರುವ ಬಾಂಗ್ಲಾ ವಲಸಿಗರಿಗೆ ಆಧಾರ್ ಕೊಡಿಸುವ ಮೂಲಕ ಮತದಾರರ ಪಟ್ಟಿಗೆ ಸೇರಿಸುವಲ್ಲಿ ರಾಜಕೀಯ ಕರಿನೆರಳಿನ ಆರೋಪ ಕೇಳಿ ಬರುತ್ತಿದೆ.

ಕೆಲವೆಡೆ ತಮ್ಮ ತೋಟಗಳಲ್ಲಿ ಕಡಿಮೆ ಕೂಲಿಗಾಗಿ ನೆಲೆ ಕಲ್ಪಿಸಿಕೊಂಡಿದ್ದ ಬೆಳೆಗಾರರು ಕೂಡ ಆಧಾರ್ ನೋಂದಾಣಿಯಂತಹ ಜಾಲ ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಭಯಗೊಂಡು ದಾರಿ ಕಾಣದಂತಹ ಸನ್ನಿವೇಶ ಎದುರಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ಪ್ರಬಾರ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರ ಪ್ರತಿಕ್ರಿಯೆ ಬಯಸಿದಾಗ ತಮಗೆ ಈ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಪ್ರಕರಣದ ಸೂತ್ರದಾರಿಯ ಪತ್ತೆ ಬಳಿಕವಷ್ಟೇ ಆಧಾರ್ ಕಾರ್ಡ್ ನಕಲಿ ಜಾಲದ ವ್ಯಾಪ್ತಿ ದೊರಕಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.