ಆಲೂರುಸಿದ್ದಾಪುರ, ಏ. 10: ಇಲ್ಲಿಗೆ ಸಮೀಪದ ಮಾಲಂಬಿ ಗ್ರಾಮದ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿದರೆ ಮಳೆಯಾಗುತ್ತದೆ ಎಂಬದು ಜನರ ನಂಬಿಕೆ. ಅದರಂತೆ ಇಂದು ಶನಿವಾರಸಂತೆ ಪಟ್ಟಣದ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಬೆಳೆಸಿತ್ತು. ಪಟ್ಟಣದಿಂದ 12 ಕಿ.ಮೀ.ದೂರದಲ್ಲಿರುವ ಸಮುದ್ರ ಮಟ್ಟದಿಂದ 5778 ಅಡಿ ಎತ್ತರದಲ್ಲಿರುವ ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿದ ಪಾದಯಾತ್ರಿಗಳು ಬೆಟ್ಟದ ಮೇಲಿರುವ ಶ್ರೀ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೆಟ್ಟಕ್ಕೆ ಸುಮಾರು 350 ವರ್ಷಗಳ ಇತಿಹಾಸ ಇದ್ದು ಬೆಟ್ಟ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.
(ಮೊದಲ ಪುಟದಿಂದ) 3ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮ ಇದಾಗಿದ್ದು, ಪಾದಯಾತ್ರೆ ಸಮಿತಿ ಪ್ರಮುಖ ಎ.ಡಿ.ಮೋಹನ್‍ಕುಮಾರ್ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ 50 ಕ್ಕಿಂತ ಹೆಚ್ಚಿನ ಪಾದಯಾತ್ರಿಗಳ ತಂಡ, ಪಟ್ಟಣದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾದ್ಯಗೋಷ್ಠಿಯೊಂದಿಗೆ ಪಾದಯಾತ್ರೆ ಹೊರಟರು. ಗುಡುಗಳಲೆ ಜಂಕ್ಷನ್ ಮೂಲಕ ಗೋಪಾಲಪುರ, ರಾಮನಹಳ್ಳಿ, ನಂದಿಗುಂದ ಮಾರ್ಗವಾಗಿ ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಬೆಳೆಸಿದರು. ಮಧ್ಯಾಹ್ನ 1 ಗಂಟೆಗೆ ಬೆಟ್ಟದ ಮೇಲಿರುವ ದೇವಾಲಯವನ್ನು ತಲುಪಿದ ಪಾದಯಾತ್ರಿಗಳು ದೇವಾಲಯದಲ್ಲಿರುವ ಶ್ರೀ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶನಿವಾರಸಂತೆ ಶ್ರೀ ರಾಮಾಂಜನೇಯ ಭಜನೆ ಮಂಡಳಿಯವರಿಂದ ಮಳೆ ಮಲ್ಲೇಶ್ವರನಿಗೆ ಭಜನೆ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿ ಶ್ರೀ ಮಳೆ ಮಲ್ಲೇಶ್ವರನಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ಪೂಜಾ ವಿಧಿವಿಧಾನವನ್ನು ನೆರವೇರಿಸಲಾಯಿತು. ಈ ಸಂದರ್ಭ ಪಾದಯಾತ್ರಾ ಸಮಿತಿ ಮತ್ತು ದಾನಿಗಳಿಂದ ಪಾದಯಾತ್ರಿಗಳಿಗೆ ಮತ್ತು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮತ್ತು ಅನ್ನದಾನವನ್ನು ಏರ್ಪಡಿಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪ್ರಮುಖರಾದ ಸಿ.ವಿ. ಜಯಪ್ಪ, ಎ.ಕೆ. ರಾಜಶೇಖರ್, ಅಶೋಕ್ ಹಾಗೂ ಇನ್ನಿತರರು ಇದ್ದರು.