ಕೂಡಿಗೆ, ಏ. 10: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ನಾಲ್ಕು ದಿನಗಳ ಕಾಲ ನಡೆದ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ವಿವಿಧ ಪೂಜಾ ಕೈಂಕರ್ಯ ಹಾಗೂ ಉತ್ಸವಗಳ ಮೆರವಣಿಗೆಗಳೊಂದಿಗೆ ತೆರೆ ಕಂಡಿತು.

ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇವಾಲಯಕ್ಕೆ ಹಿಂದಿರುಗಿದ ಸಂದರ್ಭ ಅತ್ಯಾಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಸಲಾಯಿತು.

ತೆಪ್ಪೊತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಪೂಜೆ, ಉಯ್ಯಾಲೋತ್ಸವ ನಡೆದು ಮಧ್ಯರಾತ್ರಿ ಕಾವೇರಿ ನದಿಯಲ್ಲಿ ಶ್ರೀ ಸ್ವಾಮಿ ವಿಗ್ರಹಕ್ಕೆ ತೆಪ್ಪೋತ್ಸವದ ಮೂಲಕ ಗಂಗಾಸ್ನಾನ ನೆರವೇರಿತು. ನಂತರ ಇದರ ಅಂಗವಾಗಿ ನಡೆದ ಕೊನೆಯ ಸಾಂಸ್ಕøತಿಕ ಕಾರ್ಯಕ್ರಮವು ಹಾಸನದ ಮೋಹನ್ ಮೆಲೋಡಿಸ್ ರವರಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು.

ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಅವರು ನೆರವೇರಿಸಿ ಮಾತನಾಡುತ್ತಾ, ಗ್ರಾಮಾಂತರ ಪ್ರದೇಶದ ಜನತೆ ಒಂದೆಡೆ ಸೇರಿ ಪುರಾತನ ಹಿನ್ನೆಲೆಯುಳ್ಳ ಶ್ರೀ ರಾಮನ ಉತ್ಸವದ ಆಚರಣೆ ಮಾಡುತ್ತಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯ್ತಿ ಸದಸ್ಯ ಹೆಚ್.ಆರ್.ಶ್ರೀನಿವಾಸ್ ಮಾತನಾಡುತ್ತ, ದೇವಾಲಯದ ಅಭಿವೃದ್ಧಿಗೆ ಜಿಲ್ಲಾ ಪಂಚಾಯ್ತಿ ವತಿಯಿಂದ ಅನುದಾನ ನೀಡಲಾಗುವದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಂ.ಸುರೇಶ್ ವಹಿಸಿದ್ದರು.

ಹೆಬ್ಬಾಲೆ ಗ್ರಾಮ ಪಂಚಾಯ್ತಿ ಸದಸ್ಯರಾದ ವೆಂಕಟೇಶ್, ಶಿವನಂಜಪ್ಪ, ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಜೆ.ಇ. ಮಹೇಶ್, ಕಣಿವೆಯ ಆರ್.ಆರ್. ಕನಸ್ಟ್ರಕ್ಷನ್ಸ್‍ನ ಆರ್.ಆರ್.ಕುಮಾರ್, ದೇವಾಲಯ ಸಮಿತಿಯ ಕಾರ್ಯದರ್ಶಿ ಶೇಷಾಚಲ, ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಗೌರವಾಧ್ಯಕ್ಷ ಗಣೇಶ್ ಸೇರಿದಂತೆ ಸಮಿತಿಯ ನಿರ್ದೇಶಕರುಗಳು ಹಾಜರಿದ್ದರು. ಈ ಬ್ರಹ್ಮರಥೋತ್ಸವದ ಅಂಗವಾಗಿ "ಕಣಿವೆ ಶ್ರೀ ಪ್ರಶಸ್ತಿ"ಗೆ ಭಾಜನರಾದ ನಿವೃತ್ತ ಉಪಾಧ್ಯಾಯರಾದ ಶಿವಪ್ಪಚಾರ್ ಮತ್ತು ಈ.ಕೆ.ಸುಬ್ರಾಯ್ ರವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಈ ಸಂದರ್ಭ ರಥೋತ್ಸವದ ಅಂಗವಾಗಿ ನಡೆದ ಕಬಡ್ಡಿ ಪಂದ್ಯಾಟ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ವಿತರಿಸಲಾಯಿತು. ಸಮಿತಿಯ ನಿರ್ದೇಶಕ ಮಧು ಸ್ವಾಗತಿಸಿ, ಕೆ.ಎಸ್. ಮಹೇಶ್ ವಂದಿಸಿದರು.