ಮಡಿಕೇರಿ, ಏ. 10 : ಜಿಲ್ಲಾಮಟ್ಟದ ಪತ್ರಕರ್ತರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಳೆಯಂಡ ಪಾರ್ಥ ಚಿಣ್ಣಪ್ಪ ನಾಯಕತ್ವದ ವೀರಾಜಪೇಟೆ ಸೌತ್ ಟೈಗರ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೂರ್ನಾಡಿನ ಫ್ರೆಂಡ್ಸ್ ಕ್ರಿಕೆಟರ್ಸ್ ಸಂಯುಕ್ತಾಶ್ರಯದಲ್ಲಿ ಭಾನುವಾರ ಮೂರ್ನಾಡು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಅಂತಿಮ ಹಣಾಹಣಿಯಲ್ಲಿ ಕುಡೆಕಲ್ ಸಂತೋಷ್ ನಾಯಕತ್ವದ ಟೀಮ್ ಕೋಬ್ರಾ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಸುವರ್ಣ ಮಂಜು ನಾಯಕತ್ವದ ಮೀಡಿಯಾ ಇಲೆವನ್ ತಂಡ ತೃತೀಯ ಹಾಗೂ ವಿಜಯ ಹಾನಗಲ್ ನಾಯಕತ್ವದ ನಾರ್ಥ್ ಲಯನ್ಸ್ ತಂಡ ನಾಲ್ಕನೇ ಸ್ಥಾನ ಪಡೆಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಪ್ರಾಯೋಜಿಸಿದ ಟ್ರೋಫಿ ಪ್ರದಾನ ಮಾಡಲಾಯಿತು. ಪ್ರದರ್ಶನ ಪಂದ್ಯದಲ್ಲಿ ಜಿ.ವಿ. ರವಿಕುಮಾರ್ ನಾಯಕತ್ವದ ಕೂಲ್ ಕ್ರಿಕೆಟರ್ಸ್ ತಂಡವನ್ನು ಮಡಿಕೇರಿ ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ಪ್ರದೀಪ್ ಕುಮಾರ್ ನಾಯಕತ್ವದ ಪೊಲೀಸ್ ತಂಡ ಪರಾಭವಗೊಳಿಸಿತು.
ಪಂದ್ಯಾವಳಿ ಪುರುಷೋತ್ತಮ ಹಾಗೂ ಅಂತಿಮ ಪಂದ್ಯದ ಪಂದ್ಯ ಪುರುಷ ಬಹುಮಾನವನ್ನು ಸೌತ್ ಟೈಗರ್ಸ್‍ನ ಮುಸ್ತಾಫ ಪಡೆದುಕೊಂಡರು. ಪಂದ್ಯಾವಳಿಯ ಸರ್ವತೋಮುಖ ಆಟಗಾರ ಬಹುಮಾನವನ್ನು ಮೀಡಿಯಾ ಇಲೆವನ್ ನಾಯಕ ಸುವರ್ಣ ಮಂಜು, ಬೆಸ್ಟ್ ಬೌಲರ್ ಬಹುಮಾನವನ್ನು ಟೀಮ್ ಕೋಬ್ರಾ ತಂಡದ ವಿವೇಕ್, ಬೆಸ್ಟ್ ಬ್ಯಾಟ್ಸ್‍ಮನ್ ಬಹುಮಾನವನ್ನು ನಾರ್ಥ್ ಲಯನ್ಸ್‍ನ ಜಯಪ್ರಕಾಶ್, ಬೆಸ್ಟ್ ಕ್ಯಾಚ್ ಬಹುಮಾನವನ್ನು ನಾರ್ಥ್ ಲಯನ್ಸ್ ತಂಡದ ಎಸ್.ಎ. ಮುರಳೀಧರ್ ಪಡೆದುಕೊಂಡರು.
ಜಿಲ್ಲಾ ಪತ್ರಕರ್ತರ ಸಂಘ ಖಜಾಂಚಿ ಸವಿತಾ ರೈ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ನಿರ್ದೇಶಕ ಎಸ್.ಎ. ಮುರಳೀಧರ್, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಯಕರ್ನಾಟಕ ಜಿಲ್ಲಾಧ್ಯಕ್ಷ ಮುಕ್ಕಾಟೀರ ರಾಬಿನ್ ಕುಟ್ಟಪ್ಪ, ಸರ್ಕಲ್ ಇನ್ಸ್‍ಪೆಕ್ಟರ್ ಪ್ರದೀಪ್‍ಕುಮಾರ್, ಅಯ್ಯಪ್ಪ ಯುವಕ ಸಂಘ ಕಾರ್ಯದರ್ಶಿ ಪಂದ್ಯಂಡ ರಮೇಶ್, ಹಿಂದೂ ಮಲೆಯಾಳಿ ಸಂಘ ಅಧ್ಯಕ್ಷ ಕೆ. ಬಾಬು, ಕೃಷಿಕ ಚೆಟ್ಟಿಮಾಡ ಅಮರ್, ಮಾಜಿ ಯೋಧ ಎನ್.ಸಿ. ದೀಪಕ್, ಬೆಳೆಗಾರರಾದ ಕೆರೆಮನೆ ಭರತ್‍ಕುಮಾರ್, ಕೋಟೆರ ಸಚಿನ್ ಬಹುಮಾನ ವಿತರಿಸಿದರು.
ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದ ಮೂರ್ನಾಡು ಫ್ರೆಂಡ್ಸ್ ಕ್ರಿಕೆಟರ್ಸ್‍ನ ಸುರೇಶ್ ಮುತ್ತಪ್ಪ, ಪುದಿಯೊಕ್ಕಡ ರಮೇಶ್ ಅವರನ್ನು ನಾಲ್ಕು ತಂಡದ ಆಟಗಾರರು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ನಿರೂಪಿಸಿದರು. ನಿರ್ದೇಶಕ ಕೆ.ಬಿ. ಮಂಜುನಾಥ್ ಸ್ವಾಗತಿಸಿದರು. ಉಪಾಧ್ಯಕ್ಷ ಜಿ.ವಿ. ರವಿಕುಮಾರ್ ವಂದಿಸಿದರು.