ಚೆಟ್ಟಳ್ಳಿ, ಏ. 11: ಚೆಟ್ಟಳ್ಳಿಯಲ್ಲಿ ಕೋಳಿ ಮಾಂಸ ಕೆ.ಜಿಗೆ ಕೇವಲ ರೂ. 99 ಮಾರಾಟವಾಗುತ್ತಿದ್ದು ಗ್ರಾಹಕರು ಕೋಳಿ ಮಾಂಸದ ಅಂಗಡಿಗೆ ಮುಗಿಬೀಳುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಚೆಟ್ಟಳ್ಳಿಯಲ್ಲಿ ಇತ್ತೀಚಿನವರೆಗೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು. ಬೆಲೆಯ ಬಗ್ಗೆ ಗ್ರಾಹಕರು ಪ್ರಶ್ನಿಸಿದಾಗ ಹೆಚ್ಚಿನ ಬೆಲೆಗೆ ಟೆಂಡರ್ ಪಡೆದು ಮಾಂಸ ಮಾರಾಟ ಮಾಡಬೇಕಿದೆ ಎಂಬದು ಮಾರಾಟಗಾರರ ಉತ್ತರವಾಗಿತ್ತು.
ಪಂಚಾಯಿತಿಯ ಮಾರುಕಟ್ಟೆ ಕಟ್ಟಡದಲ್ಲಿ ಕುರಿ, ಹಂದಿ ಮಳಿಗೆ ಒಂದೊಂದು ಮಳಿಗೆ ಇದ್ದರೆ ಕೋಳಿ ಮಳಿಗೆ ಎರಡು ಇದೆ. ಟೆಂಡರ್ ಮಾಡುವಾಗ ಎರಡನ್ನು ಒಬ್ಬರೇ ಪಡೆದು ಒಂದು ಮಳಿಗೆಯಲ್ಲೇ ಹೆಚ್ಚಿನ ಬೆಲೆಗೆ ವ್ಯಾಪಾರ ನಡೆಸುತ್ತಿದ್ದರು.
ಈ ವರ್ಷ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ನಿರ್ಣಯದಂತೆ ಲೈಸನ್ಸ್ ನೀಡುವಂತೆ ತೀರ್ಮಾನಿಸಲಾಯಿತು. ಕೋಳಿ ಮಾಂಸ ಮಾರಾಟಕ್ಕೆ ರೂ. 75 ಸಾವಿರಕ್ಕೆ ಲೈಸನ್ಸ್ ನೀಡಲಾಯಿತು. ಮಾರುಕಟ್ಟೆಯಲ್ಲಿ ಕಟ್ಟಡ ಬಾಡಿಗೆ ನೀಡಿ ಎರಡು ಲೈಸನ್ಸ್ ಜುಬೇರ್ ಪಡೆದರೆ, ಹುಸೇನ್ ಎಂಬವರು ಮತ್ತೊಂದು ಲೈಸನ್ಸ್ ಪಡೆದರು. ಎರಡು ಕೋಳಿಮಾಂಸ ಮಳಿಗೆಯಲ್ಲಿ ತೀವ್ರ ಪೈಪೋಟಿಯಿಂದಾಗಿ ದಿನೇ ದಿನೇ ಮಾಂಸದ ಬೆಲೆ ಕಡಿಮೆಯಾಗಿ ಕೆ.ಜಿ. ಒಂದಕ್ಕೆ ರೂ. 99 ತಲುಪಿದೆ. ಸಾರ್ವಜನಿಕರು ಗಗನಕ್ಕೇರಿರುವ ತರಕಾರಿ ಖರೀದಿಯನ್ನು ಬಿಟ್ಟು ಕೋಳಿ ಮಾಂಸಕ್ಕೆ ಮುಗಿಬೀಳುತ್ತಿದ್ದಾರೆ. ಹಂದಿಮಾಸ ಮಾರಾಟಕ್ಕೆ ರೂ. 25 ಸಾವಿರದಂತೆ 2 ಲೈಸನ್ಸ್ ಹಾಗೂ ಮೀನು ಮಾರಾಟಕ್ಕೆ 3 ಲೈಸನ್ಸ್ ಪಡೆದು ಆಟೋದಲ್ಲಿ ಮಾರಾಟ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಕೋಳಿ, ಹಂದಿ ಹಾಗೂ ಕುರಿಮಾಂಸ ಮಾರಾಟಕ್ಕೆ ಮತ್ತೆ ಕೆಲವರು ಲೈಸನ್ಸ್ ಪಡೆದು ಪೈಪೋಟಿಗೆ ಇಳಿಯುವ ಸಾಧ್ಯತೆ ಇದ್ದು ಎಲ್ಲಾ ಮಾಂಸದ ಮಾರಾಟದ ಬೆಲೆಗಳೆಲ್ಲ ಪೈಪೋಟಿಯ ರಭಸದಲ್ಲಿ ಸಾರ್ವಜನಿಕರಿಗೆ ಕಡಿಮೆ ಹಣಕ್ಕೆ ಸವಿಯಲು ಸಿಗಲಿದೆ ಎನ್ನಲಾಗಿದೆ.
-ಕರುಣ್ ಕಾಳಯ್ಯ, ಲೂಹಿಸ್