ಮಡಿಕೇರಿ, ಏ. 11: ಕೊಡಗಿಗೂ ಕ್ರೀಡೆಗೂ ಹೆಚ್ಚಿನ ನಂಟು. ಪುಟ್ಟ ಜಿಲ್ಲೆಯಾದರೂ, ಕ್ರೀಡೆಗೆ ಸಂಬಂಧಿಸಿದಂತೆ ಕೊಡಗಿನ ಕ್ರೀಡಾ ಹಿರಿಮೆ ದೊಡ್ಡದು. ಕ್ರೀಡೆಗೆ ಸಂಬಂಧಿಸಿದಂತೆ ಕೊಡಗು ಒಂದಲ್ಲಾ ಒಂದು ರೀತಿಯಲ್ಲಿ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿಶ್ವದ ಗಮನವನ್ನು ಸೆಳೆಯುತ್ತದೆ. ಹಾಕಿ, ಕ್ರಿಕೆಟ್, ಟೆನ್ನಿಸ್, ಬ್ಯಾಡ್‍ಮಿಂಟನ್, ಸ್ಕ್ವಾಷ್, ಅಥ್ಲೆಟಿಕ್ಸ್ ಸೇರಿದಂತೆ ಬಹುತೇಕ ಕ್ರೀಡಗಳಲ್ಲಿ ಕೊಡಗಿನ ಕ್ರೀಡಾಪಟುಗಳು ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಈ ಬಾರಿ ನಡೆದ ಒಲಂಪಿಕ್ಸ್‍ನಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಸುಮಾರು 100 ಕ್ರೀಡಾಪಟುಗಳ ಪೈಕಿ 7 ಮಂದಿ ಕೊಡಗಿನವರು ಎಂಬದು ಕೊಡಗಿಗೆ ಮಾತ್ರವಲ್ಲ ಇಡೀ ಕರ್ನಾಟಕ ರಾಜ್ಯಕ್ಕೆ ಒಂದು ಪ್ರತಿಷ್ಠೆಯ ವಿಚಾರ. ಏಕೆಂದರೆ ರಾಜ್ಯದಿಂದ ಒಲಂಪಿಕ್ಸ್‍ಗೆ ತೆರಳಿದ್ದ 10 ಮಂದಿಯ ಪೈಕಿ ಕೊಡಗಿನವರು 7 ಜನ ಎಂಬದು ಕೊಡಗಿಗೂ ಕ್ರೀಡೆಗೂ ಇರುವ ಸಂಬಂಧಕ್ಕೆ ಉದಾಹರಣೆ. ಪ್ರಸ್ತುತ ಭಾರತ ಹಾಕಿ ತಂಡದಲ್ಲಿ ನಾಲ್ವರು ಕೊಡಗಿನವರಿದ್ದಾರೆ. ಟೆನ್ನಿಸ್, ಬ್ಯಾಡ್‍ಮಿಂಟನ್, ಸ್ಕ್ವಾಷ್‍ನಲ್ಲಿ ದೇಶವನ್ನು ಈಗಲೂ ಕೊಡಗಿನವರು ಪ್ರತಿನಿಧಿಸುತ್ತಿದ್ದಾರೆ.

ಇಂತಹ ವಿಶೇಷತೆಯೊಂದಿಗೆ ಕೊಡಗು ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ನಡೆದುಕೊಂಡು ಬರುತ್ತಿರುವ ಜನಾಂಗೀಯ ಕ್ರೀಡಾಕೂಟಗಳು ಕಳೆದ 21 ವರ್ಷಗಳ ಹಿಂದೆ ಈ ಇತಿಹಾಸ ನಿರ್ಮಿಸಿದವರು ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ನಾಂದಿ ಹಾಡಿದ ಪಾಂಡಂಡ ಕುಟ್ಟಪ್ಪ ಹಾಗೂ ಕಾಶಿ ಸಹೋದರರು. ಯಾರೂ ನಿರೀಕ್ಷಿಸದ ಮಾದರಿಯಲ್ಲಿ ಅದ್ಭುತ ಯಶಸ್ಸು ಕಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿದ್ದು, ಮಾತ್ರವಲ್ಲದೆ ಗಿನ್ನಿಸ್ ದಾಖಲೆಯ ಕದ ತಟ್ಟುತ್ತಿದೆ. ಇದಾದ ಬಳಿಕ ಒಂದೊಂದಾಗಿ ಜಿಲ್ಲೆಯ ಅರೆಭಾಷಾ ಗೌಡ ಜನಾಂಗದವರು, ಮೂಲನಿವಾಸಿ ಜನಾಂಗದವರು ಸೇರಿದಂತೆ ಇತರ ಜನಾಂಗದವರೂ ಜನಾಂಗೀಯ ಕ್ರೀಡಾಕೂಟಗಳ ಮೂಲಕ ಬೇಸಿಗೆಯ ಪರ್ವ ಕಾಲದಲ್ಲಿ ಇಡೀ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ಕಲರವ ಕಂಡು ಬರುತ್ತದೆ. 2017ರ ಕ್ರೀಡಾ ಕಲರವಕ್ಕೆ ಇದೀಗ ಕ್ಷಣಗಣನೆ ಆರಂಭಗೊಂಡಿದೆ.

ಕೌಟುಂಬಿಕ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ ಎರಡನೆಯ ಬಾರಿಗೆ ನಡೆಯುತ್ತಿದ್ದು, ಈ ಬಾರಿಯ ಬಿದ್ದಾಟಂಡ ಕಪ್ ಹಾಕಿ ನಮ್ಮೆಗೆ ನಾಲ್ಕುನಾಡು ಸಜ್ಜುಗೊಳ್ಳುತ್ತಿದೆ. ಏಪ್ರಿಲ್ 17ರಿಂದ ಈ ಕ್ರೀಡಾಕೂಟ ಆರಂಭವಾಗಲಿದ್ದು, ಒಂದು ತಿಂಗಳು ಹಾಕಿ ಹಬ್ಬ ನಡೆಯಲಿದೆ. ಈ ಬಾರಿ ಹಾಕಿ ತಂಡವನ್ನೇ ಕರೆಸಿ ಭಾರತ ತಂಡ ಹಾಗೂ ಕೂರ್ಗ್ ಇಲವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಸಲು ಪ್ರಯತ್ನ ನಡೆಯುತ್ತಿರುವದು ಹೊಸ ಬೆಳವಣಿಗೆಯಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆದುಕೊಂಡು ಬರುತ್ತಿರುವ ಅರೆಭಾಷೆ ಕೊಡಗಿನ ಬಾಳೆಲೆ ಪಟ್ಟಣ ಇದಕ್ಕೆ ಸಜ್ಜುಗೊಳ್ಳುತ್ತಿದೆ. ಬಾಳೆಲೆಯಲ್ಲಿ ಐದನೇ ಬಾರಿಗೆ ಕ್ರಿಕೆಟ್ ಉತ್ಸವ ನಡೆಯಲಿದ್ದು, ಈ ಬಾರಿ ಅಳಮೇಂಗಡ ಕಪ್ ಕ್ರಿಕೆಟ್ ಪಂದ್ಯಾಟ ಏಪ್ರಿಲ್ 24 ರಿಂದ ಜರುಗಲಿದೆ.

ಅಮ್ಮಕೊಡವ ಕ್ರೀಡಾಕೂಟ, ಹೆಗ್ಗಡೆ ಜನಾಂಗದ ಕೂಟ, ಐರಿ ಸಮಾಜ, ಕುಡಿಯ ಸೇರಿದಂತೆ ಇತರ ಮೂಲ ನಿವಾಸಿಗಳೂ ತಮ್ಮ ಜನಾಂಗೀಯ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಮುಸ್ಲಿಂ ಜನಾಂಗದಲ್ಲೂ ಮುಸ್ಲಿಂ ಕಪ್ ಕ್ರಿಕೆಟ್, ವಾಲಿಬಾಲ್, ದಲಿತ ಸಂಘಟನೆ ಯಿಂದ ಜರುಗುವ ಜೈ ಭೀಮ್ ಕಪ್ ಕ್ರಿಕೆಟ್, ಮಲೆಯಾಳಿ ಜನಾಂಗದ ಕ್ರೀಡಾಕೂಟ, ಮರಾಠಿ ಸಮಾಜ, ಮೊಗೇರ ಸಮಾಜ, ಬ್ರಾಹ್ಮಣ ಸಮಾಜ, ಮೊಗೇರ ಸಮಾಜ, ಬಿಲ್ಲವ ಸಮಾಜದ ಕ್ರೀಡಾಕೂಟಗಳೂ ಕೊಡಗಿನಲ್ಲಿ ನಡೆದುಕೊಂಡು ಬರುತ್ತಿದ್ದು, ಕ್ರೀಡಾ ಕಲರವ ಈಗಾಗಲೇ ಆರಂಭಗೊಳ್ಳುತ್ತಿದೆ. ಬೇಸಿಗೆಯ ಪರ್ವ ಕಾಲವಾದರೂ, ಕ್ರೀಡಾಸ್ಫೂರ್ತಿ ಕೊಡಗಿನಲ್ಲಿ ಕಡೆಮೆ ಯಾಗದು. ದೇಶದ ಇತರೆಡೆ, ವಿದೇಶಗಳಲ್ಲಿರುವ ಕ್ರೀಡಾಪಟುಗಳನ್ನೂ ಪ್ರತಿಷ್ಠಿತ ಪಂದ್ಯಗಳಿಗೆ ಕರೆಸಿಕೊಳ್ಳುವದು ಅವರೂ ಉತ್ಸಾಹದಿಂದ ಭಾಗಿಯಾಗುವದು ಇದಕ್ಕೆ ಸಾಕ್ಷಿಯಾಗಿದೆ.

ಕೊಡಗಿನಲ್ಲಿ ನಡೆಯುವ ಕ್ರೀಡಾಕೂಟಗಳು ಕೇವಲ ಕ್ರೀಡೆಯಾಗಿ ನಡೆಯದೆ ಉತ್ಸವದ ರೀತಿ ನಡೆಯವದು ಕೊಡಗಿನ ವಿಶೇಷತೆಯಾಗಿದೆ. ಆಯಾ ಜನಾಂಗಕ್ಕೆ ಸೀಮಿತವಾಗಿ ಈ ಕ್ರೀಡಾ ಹಬ್ಬಗಳು ನಡೆಯುತ್ತಿದೆಯಾದರೂ, ಕ್ರೀಡೆಯ ಮೂಲಕ ಆಯಾ ಜನಾಂಗ ಒಗ್ಗಟ್ಟು, ಪ್ರೀತಿ - ಸಾಮರ ಸ್ಯದೊಂದಿಗೆ ಬೆಸೆಯುತ್ತಿರುವದು ಶ್ಲಾಘನೀಯವಾದದ್ದು. ಜನಾಂಗೀಯ ಕ್ರೀಡೆಗಳಲ್ಲದೆ, ವಿವಿಧ ಸಂಘ-ಸಂಸ್ಥೆಗಳು, ಕ್ರೀಡಾ ಕ್ಲಬ್‍ಗಳ ಮೂಲಕವೂ ಬೇಸಿಗೆ ಅವಧಿಯಲ್ಲಿ ಕೊಡಗಿನಲ್ಲಿ ವಿವಿಧ ಕ್ರೀಡೆಗಳು ಸಾಮಾನ್ಯವಾಗಿ ನಡೆಯುತ್ತವೆ.