ಸೋಮವಾರಪೇಟೆ,ಏ.11: ಇಂದು ಸಂಜೆ ವೇಳೆಗೆ ಸೋಮವಾರಪೇಟೆಯಲ್ಲಿ ಮಳೆ ಬಿದ್ದು ವಾತಾವರಣ ತಂಪಾಗಿದೆ. ಆದರೆ ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಮಳೆಯಾಗದೇ ಇದ್ದುದರಿಂದ ಬಿಸಿಲ ಬೇಗೆ ಹೇಳತ್ತೀರದ್ದಾಗಿತ್ತು.ಹಗಲು ವೇಳೆಯಲ್ಲಿ ಹೊರಗೆ ಓಡಾಡುವದೂ ಕಷ್ಟ. ಉರಿ ಬಿಸಿಲು ವಾತಾವರಣವನ್ನು ಇನ್ನಷ್ಟು ಬಿಸಿಯಾಗಿಸಿತ್ತು. ಫ್ಯಾನ್ ಇಲ್ಲದೆ ಮನೆಯೊಳಗೆ ಇರಲಾಗದು ಎಂಬಷ್ಟರ ಮಟ್ಟಿಗೆ ಭೂಮಿ ಬಿಸಿಯಾಗಿತ್ತು.
ಮನುಷ್ಯರು ಬೇಸಿಗೆಯಲ್ಲಿ ತಣ್ಣೀರ ಸ್ನಾನಕ್ಕೆ ಮೊರೆಹೋಗಿ ಅಲ್ಪ ಮಟ್ಟಿಗೆ ಹಾಯಾಗುತ್ತಾರೆ. ಆದರೆ ವನ್ಯ ಪ್ರಾಣಿಗಳು? ಅರಣ್ಯದಲ್ಲಿ ಕೆರೆಕಟ್ಟೆಗಳು ಬತ್ತಿ ಹೋಗಿ ಕುಡಿಯಲೂ ನೀರಿಲ್ಲ. ಇಂತಹ ಸನ್ನಿವೇಶದಲ್ಲಿ ಅರಣ್ಯಬಿಟ್ಟು ಜನವಸತಿ ಪ್ರದೇಶದ ಎಸ್ಟೇಟ್‍ನಲ್ಲೇ ಬೀಡುಬಿಟ್ಟಿರುವ ಒಂಟಿ ಕಾಡಾನೆ ಯೊಂದು ಸೋಮವಾರಪೇಟೆ-ಮಡಿಕೇರಿ ಹೆದ್ದಾರಿಯ ಕಾಜೂರು ಬಳಿ ಬಿಸಿಲಿನ ಬೇಗೆ ತಾಳಲಾರದೆ ಮಣ್ಣಿನ ಧೂಳನ್ನು ಮೈಮೇಲೆ ಎರಚಿಕೊಂಡ ಕ್ಷಣಗಳು ಐಗೂರಿನ ಆಟೋ ಚಾಲಕ ಅವಿಲಾಶ್ ಅವರ ಮೊಬೈಲ್‍ನಲ್ಲಿ ಸೆರೆಯಾದ ಕ್ಷಣ ಹೀಗಿತ್ತು.
ಅಂದಹಾಗೆ ಮಡಿಕೇರಿ-ಸೋಮವಾರಪೇಟೆ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು. ಕಾಜೂರು ಅರಣ್ಯದಿಂದ ಟಾಟಾ ಕಾಫಿ ಎಸ್ಟೇಟ್ ವ್ಯಾಪ್ತಿಯಲ್ಲಿ ಈ ಒಂಟಿ ಆನೆ ಬೀಡುಬಿಟ್ಟಿದ್ದು, ಜಾಗ್ರತೆಯ ಸಂಚಾರ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ!