ಸೋಮವಾರಪೇಟೆ, ಏ. 11: ಮಕ್ಕಳ ಬೆಳವಣಿಗೆಯಲ್ಲಿ ಅಂಗನವಾಡಿಗಳ ಪಾತ್ರ ಅನನ್ಯವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹೆಚ್ಚು ಕ್ರಿಯಾಶೀಲರಾಗಿರಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು. ಬೇಳೂರು ಗ್ರಾ.ಪಂ. ಬಳಗುಂದ ಗ್ರಾಮದಲ್ಲಿ ಶಾಸಕರ ಸಹಕಾರ ದೊಂದಿಗೆ ನಬಾರ್ಡ್ನಿಂದ ಕೈಗೊಳ್ಳಲಾದ ರೂ. 9.17 ಲಕ್ಷ ವೆಚ್ಚದ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶುದ್ಧ ನೀರಿನಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ತಾಲೂಕಿನ 8 ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಸೇರಿದಂತೆ ಇತರರು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್, ಉಪಾಧ್ಯಕ್ಷ ಸಂತೋಷ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸದಸ್ಯ ಕೆ.ಎ. ಯಾಕೂಬ್, ಜಿ.ಪಂ. ಮಾಜಿ ಸದಸ್ಯ ಬಿ. ಶಿವಪ್ಪ, ಚರ್ಚ್ ಧರ್ಮಗುರು ರಾಯಪ್ಪ, ವಿನ್ಸೆಂಟ್ ಮೊಂತೆರೋ, ಬಳಗುಂದ ವಾರ್ಡ್ ಸದಸ್ಯ ಸೇರಿದಂತೆ ಗ್ರಾ.ಪಂ. ಸದಸ್ಯರುಗಳು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.