ಬೆಂಗಳೂರು, ಏ. 11: ಇಡೀ ರಾಜ್ಯದ ಗಮನ ಸೆಳೆದಿದ್ದ ದಿಡ್ಡಳ್ಳಿ ಆದಿವಾಸಿಗಳ ಪುನರ್ವಸತಿ ಸಂಬಂಧಿಸಿದಂತೆ ಅರ್ಹರಿಗೆ ನ್ಯಾಯ ಒದಗಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಈ ವಿಷಯದಲ್ಲಿ ಸರಕಾರ ಯಾವದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸುವದಿಲ್ಲ. ದಿಡ್ಡಳ್ಳಿಯಲ್ಲೇ ನಿರಾಶ್ರಿತರಿಗೆ ವಸತಿ ಕಲ್ಪಿಸುವ ಸಂಬಂಧ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲು ಮತ್ತು ಉದ್ದೇಶಿಗ ಪ್ರದೇಶ ಕಂದಾಯ ಇಲಾಖೆಗೆ ಒಳಪಡಲಿದೆಯೇ ಎಂದು ಖಾತ್ರಿಪಡಿಸಿಕೊಳ್ಳಲು ತಾ. 17 ಮತ್ತು 18ರಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ದಿಡ್ಡಳ್ಳಿ ಆದಿವಾಸಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಮಂಗಳವಾರದಂದು ಬೆಂಗಳೂರಿನ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಉನ್ನತಮಟ್ಟ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೊಡಗಿನ ಎಲ್ಲಾ ಅರ್ಹ

(ಮೊದಲ ಪುಟದಿಂದ)ಆದಿವಾಸಿಗಳ ವಸತಿ ಮತ್ತು ಭೂರಹಿತರ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದೆ. ವಿಶೇಷವಾಗಿ ದಿಡ್ಡಳ್ಳಿ ಆದಿವಾಸಿ ನಿರಾಶ್ರಿತರಿಗೆ ಮೊದಲ ಆದ್ಯತೆಯಾಗಿ ಪುನರ್ವಸತಿ ಕಲ್ಪಿಸಲು ಸರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಅಲ್ಲಿಯವರೆಗೆ ದಿಡ್ಡಳ್ಳಿ ನಿರಾಶ್ರಿತರು ಪ್ರಸ್ತುತ ವಾಸವಿರುವ ಸ್ಥಳದಲ್ಲೇ ಆಶ್ರಯ ಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ದಿಡ್ಡಳ್ಳಿ ಪ್ರದೇಶ ಸಂಪೂರ್ಣವಾಗಿ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವದಾದರೆ ಅಲ್ಲೇ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಸರಕಾರ ಸಿದ್ಧವಿದೆ. ಅದಕ್ಕಾಗಿ ಸಮಗ್ರ ಪರಿಶೀಲನೆಯ ಅಗತ್ಯವಿದೆ. ಒಂದು ವೇಳೆ ದಿಡ್ಡಳ್ಳಿಯಲ್ಲೇ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತಾಂತ್ರಿಕ ಸಮಸ್ಯೆ ಎದುರಾದರೆ ಸರಕಾರ ಖಂಡಿತಾ ಪರ್ಯಾಯ ವ್ಯವಸ್ಥೆ ಮಾಡುತ್ತದೆ. ಭೂಮಿ ಮತ್ತು ವಸತಿ ವಂಚಿತರ ಪಟ್ಟಿ ಮಾಡಿ ಅರ್ಹರಿಗೆ ಕಂದಾಯ ಇಲಾಖೆಯ ಜಾಗದಲ್ಲಿ ತಲಾ 3 ಎಕರೆ ಭೂಮಿ ಮತ್ತು ವಸತಿ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ ಬದ್ಧವಾಗಿದ್ದು, ಇದಕ್ಕಾಗಿ ಅಗತ್ಯವಿದ್ದಲ್ಲಿ ಸಿ ಮತ್ತು ಡಿ ಜಾಗವನ್ನು ಸರಕಾರ ವಾಪಾಸು ತೆಗೆದುಕೊಳ್ಳಲು ಹಿಂಜರಿಯುವದಿಲ್ಲ. ಕಂದಾಯ ಮಂತ್ರಿಗಳು ಕೊಡಗಿಗೆ ಭೇಟಿ ನೀಡಿ ಎರಡು ದಿನಗಳ ಸಮಗ್ರ ಪರಿಶೀಲನೆ ನಡೆಸಿದ ನಂತರ ಮತ್ತೊಮ್ಮೆ ಬೆಂಗಳೂರಿನಲ್ಲಿ ಹೋರಾಟ ಸಮಿತಿಯ ಪ್ರಮುಖರನ್ನು ಒಳಗೊಂಡ ಉನ್ನತ ಮಟ್ಟದ ಸಭೆ ಕರೆದು ಅಂತಿಮ ನಿರ್ಧಾರ ತೆಗೆದುಕೊಳ್ಳುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖ ಮಾಜಿ ಶಾಸಕ ಹಾಗೂ ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಅವರು ಕೊಡಗಿನ ಆದಿವಾಸಿಗಳ ಮತ್ತು ವಸತಿ ರಹಿತರ ಯಾತನೆಯನ್ನು ಇದುವರೆಗೂ ಯಾರು ಕೇಳಲಿಲ್ಲ. ಆದಿವಾಸಿಗಳ ವಿರುದ್ಧ ಕೊಡಗಿನಲ್ಲಿ ವ್ಯವಸ್ಥಿತವಾದ ಷಡ್ಯಂತ್ರ ರೂಪಿಸಿದ್ದು, ಇದು ಸರಕಾರದ ವಿರುದ್ಧ ಕೆಲವು ಶಕ್ತಿಗಳು ನಡೆಸುತ್ತಿರುವ ಪಿತೂರಿಯ ಭಾಗವಾಗಿದೆ ಎಂದರಲ್ಲದೆ, ದಿಡ್ಡಳ್ಳಿ ಸೇರಿದಂತೆ ಕೊಡಗಿನ ಆದಿವಾಸಿಗಳಿಗೆ ಮತ್ತು ವಸತಿ ರಹಿತರಿಗೆ ಪುನರ್ವಸತಿ ಕಲ್ಪಿಸುವ ಕುರಿತ ಈ ಹೋರಾಟ ಸರಕಾರದ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.

ದಿಡ್ಡಳ್ಳಿ ಪ್ರದೇಶ ದಾಖಲೆಗಳ ಆಧಾರದಲ್ಲಿ ಪೈಸಾರಿಯಾಗಿದೆ ಎಂದು ತಿಳಿಸಿದ ಎ.ಕೆ. ಸುಬ್ಬಯ್ಯ ‘ಪೈಸಾರಿ’ ಎಂದರೆ ಏನು ಎಂಬ ವ್ಯಾಖ್ಯೆನವನ್ನು ಕೂರ್ಗ್ ಗೆಜೆಟಿಯರ್‍ನಲ್ಲಿ ಉಲ್ಲೇಖಿಸಿರುವ ಅಂಶವನ್ನು ಸಭೆಯಲ್ಲಿ ಓದಿದರು. 1999 ರವರೆಗೂ ಪೈಸಾರಿಯಾಗಿದ್ದ ದಿಡ್ಡಳ್ಳಿ ಭೂ ಪ್ರದೇಶವನ್ನು ಅರಣ್ಯ ಪೈಸಾರಿ ಎಂದು ಪರಿವರ್ತಿಸಿ ಅರಣ್ಯಕ್ಕೆ ನೀಡಲಾಗಿದೆ. ಆದರೆ ಕಾನೂನಿನ ಪ್ರಕಾರ ‘ಅರಣ್ಯ ಪೈಸಾರಿ’ ಎಂಬದೇ ಅಸ್ತಿತ್ವದಲ್ಲಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು. ಅರಣ್ಯ ಇಲಾಖೆಗೆ ಈ ಜಾಗ ಸೇರಬೇಕಿದ್ದರೆ ಇದನ್ನು ‘ಅರಣ್ಯ ಪೈಸಾರಿ’ ಬದಲು ‘ಮೀಸಲು ಅರಣ್ಯ’ ಎಂದು ಏಕೆ ಆದೇಶ ಹೊರಡಿಸಲಿಲ್ಲ ಎಂದು ಪ್ರಶ್ನಿಸಿದರು.

ದಿಡ್ಡಳ್ಳಿಯ ಆದಿವಾಸಿಗಳ ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲೇ ಪುನರ್ವಸತಿ ಕಲ್ಪಿಸಲು ಯಾವದೇ ಕಾನೂನಿನ ತೊಡಕಿಲ್ಲ. ಆದರೆ ಅರಣ್ಯ ಇಲಾಖೆಯ ಜನ ವಿರೋಧಿ ನೀತಿಯಿಂದಾಗಿ ಈ ಸಮಸ್ಯೆ ಉದ್ಭವಿಸಿದೆ. ದಿಡ್ಡಳ್ಳಿಯಲ್ಲಿ ಈ ಹಿಂದೆ ಆದಿವಾಸಿಗಳು ನೆಲೆ ಕಂಡುಕೊಂಡಿದ್ದ ಜಾಗದ ಸುತ್ತಲೂ ರಸ್ತೆ ಸಂಪರ್ಕವಿದೆ. ಅಲ್ಲೇ ಕೆಲವರಿಗೆ ಹಕ್ಕುಪತ್ರ ನೀಡಲಾಗಿದೆ. ಅಲ್ಲದೆ ಈ ಜಾಗದಲ್ಲಿ ನೂರಾರು ಎಕರೆ ಅತಿಕ್ರಮಣ ಮಾಡಿರುವ ಬಲಾಢ್ಯರು ಅದನ್ನೆಲ್ಲಾ ಕಾಫಿ ತೋಟವನ್ನಾಗಿ ಮಾಡಿಕೊಂಡಿದ್ದಾರೆ. ಇದ್ಯಾವದಕ್ಕೂ ಅರಣ್ಯ ಇಲಾಖೆಯ ಕಾನೂನು ಅನ್ವಯಿಸುತ್ತಿಲ್ಲ ಏಕೆ? ಕೇವಲ ಆದಿವಾಸಿಗಳನ್ನೇ ಏಕೆ ಅರಣ್ಯ ಇಲಾಖೆ ಗುರಿಯಾಗಿಸಿಕೊಂಡಿದೆ? ಎಂದು ಎ.ಕೆ. ಸುಬ್ಬಯ್ಯ ಪ್ರಶ್ನಿಸಿದರು.

ಒಂದು ವೇಳೆ ದಿಡ್ಡಳ್ಳಿ ಪ್ರದೇಶ ಸಂಪೂರ್ಣವಾಗಿ ಅರಣ್ಯವಾಗಿದ್ದರೂ ಅಲ್ಲಿ ಪುನರ್ವಸತಿ ಕಲ್ಪಿಸಲು ಅವಕಾಶವಿದೆ. ಆದರೆ ಅದಕ್ಕೆ ಕೇಂದ್ರ ಸರಕಾರದಿಂದ ಅನುಮತಿ ಪಡೆದುಕೊಳ್ಳಬೇಕಷ್ಟೆ ಎಂದು ಹೇಳಿದ ಎ.ಕೆ. ಸುಬ್ಬಯ್ಯ ಅವರು, ಈ ಹಿಂದೆ ಕೃಷಿಗೆ ಯೋಗ್ಯವಲ್ಲ ಎಂದು ಅರಣ್ಯ ಇಲಾಖೆಗೆ ನೀಡಿದ್ದ 36000 ಎಕರೆಗೂ ಅಧಿಕ ಜಾಗ ಎಲ್ಲವೂ ಕೃಷಿಗೆ ಯೋಗ್ಯವಾದದ್ದೆ. ಕೊಡಗಿನಲ್ಲಿ ಕೃಷಿಗೆ ಯೋಗ್ಯವಲ್ಲದ ಜಾಗ ಯಾವದೂ ಇಲ್ಲ. ಅರಣ್ಯ ಇಲಾಖೆಗೆ ನೀಡಿದ 36000 ಎಕರೆ ಜಾಗದಲ್ಲಿ ಇಲಾಖೆ ಒಂದೇ ಒಂದು ಮರ ಬೆಳೆಸಿಲ್ಲ ಎಂದು ಖಾರವಾಗಿ ನುಡಿದರು. ಆದ್ದರಿಂದ ಸಿ ಮತ್ತು ಡಿ ಜಾಗವನ್ನು ಸರಕಾರ ಕೂಡಲೇ ವಾಪಾಸು ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮೊದಲ ಆದ್ಯತೆಯಾಗಿ ದಿಡ್ಡಳ್ಳಿ ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲೇ ಪುನರ್ವಸತಿ ಕಲ್ಪಿಸಬೇಕು. ಇದು ಸಾಧ್ಯವಾಗದಿದ್ದಲ್ಲಿ ಒಂದೇ ಸ್ಥಳದಲ್ಲಿರುವ ಕಂದಾಯ ಇಲಾಖೆ ಜಾಗವನ್ನು ಗುರುತಿಸಿ ಅರ್ಹ ಫಲಾನುಭವಿಗಳಿಂದ ಅರ್ಜಿ ಪಡೆದು ಎಲ್ಲಾ ಭೂ ರಹಿತರಿಗೆ ತಲಾ 3 ಎಕರೆ ಕೃಷಿ ಭೂಮಿ ಹಾಗೂ ವಸತಿ ಸೌಲಭ್ಯವನ್ನು ಸರಕಾರ ಕಲ್ಪಿಸಬೇಕು. ನಾಪೋಕ್ಲು ಸಮೀಪದ ಚೆರಿಯಪರಂಬು ಮತ್ತು ಪಾಲೆಮಾಡು ಪೈಸಾರಿಯ ಫಲಾನುವಭವಿಗಳಿಗೂ ನ್ಯಾಯ ಒದಗಿಸಬೇಕು ಎಂದು ಎ.ಕೆ. ಸುಬ್ಬಯ್ಯ ಸಭೆಯಲ್ಲಿ ಒತ್ತಾಯಿಸಿದರು.

ಸಭೆಯಲ್ಲಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ ದಿಡ್ಡಳ್ಳಿ ಸೇರಿದಂತೆ ಕೊಡಗಿನ ಆದಿವಾಸಿಗಳ ಪುನರ್ವಸತಿ ಬಗ್ಗೆ ಸರಕಾರಕ್ಕೆ ವಿಶೇಷ ಕಾಳಜಿಯಿದೆ. ಅವರಿಗೆ ನ್ಯಾಯ ಒದಗಿಸುವದು ಸರಕಾರದ ಮೊದಲ ಜವಬ್ದಾರಿಯಾಗಿದೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ತೀವ್ರವಾಗಿ ಬಾಧಸುತ್ತಿದೆ. ದಿಡ್ಡಳ್ಳಿ ಭೂ ಪ್ರದೇಶಕ್ಕೆ ಸಂಬಂಧಿಸಿದಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಗೊಂದಲ ಸೃಷ್ಟಿಸಿದ್ದು, ಇದರಿಂದ ಸಮಸ್ಯೆ ಪರಿಹಾರಕ್ಕೆ ಅಲ್ಪ ಹಿನ್ನಡೆಯಾಗಿದೆ. ಆದರೆ ತಾ. 17 ಮತ್ತು 18ರಂದು ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡಲಾಗುವದು ಎಂದರು.

ಸಭೆಯಲ್ಲಿದ್ದ ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖ್ಯಸ್ಥ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರು ಮಾತನಾಡಿ, ಕೊಡಗಿನ ಆದಿವಾಸಿಗಳ ಬದುಕು ದುಸ್ತರವಾಗಿದ್ದು, ಅವರ ಬಾಳಲ್ಲಿ ಬೆಳಕು ನೀಡುವ ಹೊಣೆಗಾರಿಕೆ ಸರಕಾರಕ್ಕಿದೆ ಎಂಬದನ್ನು ಮರೆಯಬಾರದು ಎಂದು ಹೇಳಿದರಲ್ಲದೆ, ಕೊಡಗಿನ ಕೆಲವು ಭೂಮಾಲೀಕರ ಅಮಾನವೀಯ ಕೃತ್ಯಗಳಿಗೆ ಸರಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಅರಣ್ಯ ಸಚಿವ ರಮಾನಾಥ ರೈ, ಸಮಾಜ ಕಲ್ಯಾಣ ಸಚಿವ ಎಸ್. ಆಂಜನೇಯ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಸೋಮಶೇಖರ್, ವಿಧಾನ ಪರಿಷತ್ತಿನ ಸದಸ್ಯ ಗೋವಿಂದರಾಜ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್. ಅಲೋಕ್, ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ, ಅರಣ್ಯ ಇಲಾಖೆ ಕಾರ್ಯದರ್ಶಿ, ಮೈಸೂರಿನ ಪ್ರಾದೇಶಿಕ ಆಯುಕ್ತೆ ಜಯಂತಿ, ಮೈಸೂರಿನ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಪುಲ್ ಕುಮಾರ್, ಕೊಡಗಿನ ಪ್ರಬಾರ ಜಿಲ್ಲಾಧಿಕಾರಿಗಳಾಗಿರುವ ಜಿ.ಪಂ. ಸಿಇಓ ಚಾರುಲತಾ ಸೋಮಲ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್, ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಹೋರಾಟ ಸಮಿತಿಯ ಪ್ರಮುಖರಾದ ಗೌರಿ ಲಂಕೇಶ್, ನಿರ್ವಾಣಪ್ಪ, ಅಮೀನ್ ಮೊಹಿಸೀನ್, ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ನಟ ಚೇತನ್, ಕಂದಗಲ್ ಶ್ರೀನಿವಾಸ್, ಎಸ್.ವೈ. ಗುರುಶಾಂತ್, ದಿಡ್ಡಳ್ಳಿ ಆದಿವಾಸಿ ಪ್ರಮುಖರಾದ ಅಪ್ಪಾಜಿ, ಜಿ.ಕೆ. ಮುತ್ತಮ್ಮ, ಪಾಲೆಮಾಡು ಪೈಸಾರಿ ಮುಖಂಡ ಮೊಣ್ಣಪ್ಪ, ಚೆರಿಯಪರಂಬಿನ ಷರೀಫ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.