ಸಿದ್ದಾಪುರ, ಏ. 11: ಸದಾ ಸುದ್ದಿಯಲ್ಲಿರುವ ದಿಡ್ಡಳ್ಳಿಯಲ್ಲಿ ನಿರಾಶ್ರಿತರ ಗುಡಿಸಲೊಂದಕ್ಕೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ಆಶ್ರಮ ಶಾಲೆಯ ಬಳಿ ಕಳೆದ 4 ತಿಂಗಳಿನಿಂದ ನಿರಾಶ್ರಿತರು ಗುಡಿಸಲು ಕಟ್ಟಿಕೊಂಡು ವಾಸ ಮಾಡಿ ಕೊಂಡಿದ್ದಾರೆ 600ಕ್ಕೂ ಅಧಿಕ ಗುಡಿಸಲುಗಳಿದ್ದು, ಈ ಪೈಕಿ ಕಾಂಕ್ರಿಟ್ ರಸ್ತೆಯ ಬದಿಯಲ್ಲಿರುವ ಗುಡಿಸಲಿಗೆ ಸೋಮವಾರ ರಾತ್ರಿ ಅಂದಾಜು 10 ಗಂಟೆವೇಳೆ ಯಾರೋ ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಕೋವಿಯಿಂದ ಗುಂಡು ಹಾರಿಸಿದರು ಎನ್ನಲಾಗಿದೆ. ಈ ಸಂದರ್ಭ ನಿದ್ರೆಯಲ್ಲಿದ್ದ ಕೆಲವರು ಎದ್ದು ಬಂದು ನೋಡುವಷ್ಟರಲ್ಲಿ ಬೈಕಿನಲ್ಲಿ ಬಂದ ವ್ಯಕ್ತಿ ನೇರವಾಗಿ ನಿರಾಶ್ರಿತರ ಮೇಲೆ ಗುಂಡುಹಾರಿಸಿ ಪರಾರಿಯಾದ ಎಂದು ದಿಡ್ಡಳ್ಳಿ ನಿರಾಶ್ರಿತರಾದ ಮಣಿ, ಚಿಣ್ಣ, ಅಪ್ಪು ‘ಶಕ್ತಿ’ಗೆ ತಿಳಿಸಿದ್ದಾರೆ. ಗುಡಿಸಲಿನಲ್ಲಿ ಯಾರೂ ವಾಸ ಇಲ್ಲದಿದ್ದ ಕಾರಣ ಯಾವದೇ ಪ್ರಾಣಹಾನಿ ಸಂಭವಿಸಲಿಲ್ಲ. ಗುಂಡು ಹಾರಿಸಿದ ವ್ಯಕ್ತಿಯನ್ನು ಹುಡುಕಿಕೊಂಡು ಹೋದವೇಳೆ ಆತನ ಕೈಯಲ್ಲಿದ್ದ ಮದ್ದುಗುಂಡು ಕೆಳಗೆ ಬಿದ್ದಿದ್ದು, ಹಾಡಿಯ ನಿವಾಸಿಗಳು ಅದನ್ನು ಪೊಲೀಸರಿಗೆ ನೀಡಿದ್ದಾರೆ. ಬೈಕಿನಲ್ಲಿ ಬಂದ ವ್ಯಕ್ತಿ 3 ಗುಂಡುಗಳನ್ನು ನಿರಾಶ್ರಿತರ ಗುಡಿಸಿಲಿಗೆ ಹಾರಿಸಿದ ಹಿನ್ನೆಲೆ ಗುಡಿಸಿಲಿನಲ್ಲಿ ವಾಸ ಮಾಡಿಕೊಂಡಿರುವ ನಿರಾಶ್ರಿತರು ಭಯಬೀತರಾಗಿ ರಾತ್ರಿ ನಿದ್ರಿಸಲಿಲ್ಲ ಎಂದು ನಿವಾಸಿಗಳು ತಿಳಿಸಿದರು. ಗುಂಡು ಹಾರಿಸಿದ ವ್ಯಕ್ತಿಯು ಜರ್ಕಿನ್ ಧರಿಸಿದ್ದು, ಸಿದ್ದಾಪುರ ಠಾಣಾಧಿಕಾರಿ ಜೆ.ಕೆ. ಸುಬ್ರಮಣ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಗುಂಡು ಹಾರಿಸಿದ ವ್ಯಕ್ತಿಯ ಬಗ್ಗೆ ಸಿ.ಸಿ. ಕ್ಯಾಮೆರಾ ಪರಿಶೀಲನೆಯು ನಡೆಯಿತು.
ಬಂಧಿಸಲು ಆಗ್ರಹ ನಿರಾಶ್ರಿತರ ಗುಡಿಸಲಿಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕೆಂದು ಆದಿವಾಸಿ ಮುಖಂಡ ಸ್ವಾಮಿಯಪ್ಪ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಜಾಗರಣೆ: ಕಳೆದ 4 ದಿನಗಳಿಂದ ಸುರಿಯುತ್ತಿರುವ ಗುಡುಗು-ಮಿಂಚಿನ ಸಹಿತ ಧಾರಾಕಾರ ಮಳೆಗೆ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲಿ ಸೌಲಭ್ಯಗಳು ಇಲ್ಲದೆ, ಕೆಸರಿನ ನೆಲದಲ್ಲಿ ನಿದ್ರಿಸದೆ ಮರದ ಕೆಳಗೆ ಶಾಶ್ವತ ಸೂರಿಗಾಗಿ ಜಾಗರಣೆ ಕುಳಿತುಕೊಂಡಿದ್ದೇವೆ. ಗಾಳಿ-ಮಳೆಗೆ ಸಿಲುಕಿ ಕೆಲವರ ಗುಡಿಸಲಿನಿಂದ ಅಕ್ಕಿ ನೀರಿನಲ್ಲಿ ಹರಿದು ಹೋಯಿತು ಎಂದು ನಿರಾಶ್ರಿತರು ತಿಳಿಸಿದರು. - ಎ.ಎನ್. ವಾಸು