ಮಡಿಕೇರಿ, ಏ. 11: ವೈದ್ಯಕೀಯ ಕ್ಷೇತ್ರದ ಬಗ್ಗೆ ಜನರು ಅತೀವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಚಿಕಿತ್ಸೆಗೂ ಇತಿ-ಮಿತಿಗಳಿವೆ, ಎಲ್ಲಾ ರೋಗಗಳನ್ನೂ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ ಎಂಬದನ್ನು ಜನ ಅರಿಯಬೇಕಾಗಿದೆ. ಎಂದು ಕೊಡಗು ಜಿಲ್ಲಾ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಅಭಿಪ್ರಾಯ ಪಟ್ಟರು.

ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಕೊಡಗು ಜಿಲ್ಲಾ ರಾಷ್ಟ್ರೀಯ ಸಂಯುಕ್ತ ವೈದ್ಯ ಸಂಸ್ಥೆ (ನೀಮಾ) ಮತ್ತು ಆಯುಷ ಫೆಡರೇಷನ್ ಆಫ್ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ನಡೆದ ನಿರಂತರ ವೈದ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ದರು. ಗ್ರಾಮೀಣ ಪ್ರದೇಶದಲ್ಲಿ ವೈದ್ಯ-ರೋಗಿ ಗಳ ಅನುಪಾತ ಕಡಿಮೆಯಿದೆ. ಆಯುಷ್ ವೈದ್ಯರು ಇಂತಹ ಸ್ಥಳಗಳಲ್ಲಿ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಶ್ವಾಸಕಾಂಗಗಳ ಮತ್ತು ಕಿವಿಯ ರೋಗಗಳ ತುರ್ತು ಚಿಕಿತ್ಸೆಯ ಕುರಿತು ಅವರು ತರಬೇತಿ ನೀಡಿದರು.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನಿಕಟ ಪೂರ್ವ ಅಧ್ಯಕ್ಷ ಡಾ. ಎನ್. ಎ. ಸುಧಾಕರ್ ಕಣ್ಣಿನ ತುರ್ತು ಚಿಕಿತ್ಸೆಗಳ ತರಬೇತಿ ನೀಡಿ, ಮಧುಮೇಹ ಮತ್ತು ರಕ್ತದೊತ್ತಡಗಳ ನಿಯಂತ್ರಣದಿಂದ ಅನೇಕ ಕಣ್ಣಿನ ಕಾಯಿಲೆಗಳನ್ನು ತಡೆಯಬಹುದಾಗಿದೆ. ಇಂದಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಕಂಪ್ಯೂಟರ್‍ನ ಸಹವಾಸವು ಅವರ ದೃಷ್ಟಿಯನ್ನು ಹಾನಿಗೊಳಿಸುವ ಅಪಾಯವಿದೆ. ಈ ಕುರಿತು ಸಮಾಜ ಎಚ್ಚೆತ್ತುಕೊಳ್ಳುವಂತೆ ಕರೆ ನೀಡಿದರು.

ಡಾ. ಹೀನ ಮತ್ತು ಡಾ. ಸೌಮ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ಶ್ಯಾಮ್ ಕಾರ್ಯಕ್ರಮ ನಿರೂಪಿಸಿದರು. ಡಾ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜಾರಾಮ್ ವಂದಿಸಿದರು.