ಸೋಮವಾರಪೇಟೆ,ಏ.11: ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಕಳ್ಳತನ ಮುಂದುವರೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸುವ ಕಳ್ಳರು ಬಾಗಿಲನ್ನು ಮುರಿದು ಕಳ್ಳತನ ಮಾಡುತ್ತಿದ್ದಾರೆ.ನಿನ್ನೆ ದಿನ ಹಾನಗಲ್ಲು ಗ್ರಾಮದ ಕೆ.ಆರ್. ರವೀಂದ್ರ ಅವರ ಮನೆಯ ಮುಂಬಾಗಿಲನ್ನು ಕಬ್ಬಿಣದ ಪಿಕಾಸಿಯಿಂದ ಹೊಡೆದು, ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿಟ್ಟಿದ್ದ 15 ಸಾವಿರ ನಗದನ್ನು ಅಪಹರಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನಗರದ 6ನೇ ವಾರ್ಡ್ ನಿವಾಸಿ ಬಿ.ಸಿ. ಚಂದ್ರಾವತಿ ಅವರ ಮನೆಯ ಬಾಗಿಲನ್ನು ಒಡೆದು ಒಳನುಗ್ಗಿರುವ ಕದೀಮರು ರೂ. 23 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಕಳ್ಳತನ ನಿರಾತಂಕವಾಗಿ ನಡೆಯುತ್ತಿದ್ದು, ಪೊಲೀಸರ ಬೀಟ್ ನಡುವೆಯೂ ಕಳ್ಳರು ತಮ್ಮ ಚಾಣಾಕ್ಷತನ ಮೆರೆಯುತ್ತಿ ದ್ದಾರೆ. ಕಬ್ಬಿಣದ ಸರಳು, ಪಿಕಾಸಿಗಳನ್ನು ಬಳಸಿ ಮನೆಯ ಬಾಗಿಲನ್ನು ಒಡೆಯುವ ಪ್ರಕರಣಗಳು ನಿರಂತರ ನಡೆಯುತ್ತಿದ್ದರೂ ಸಹ ಕಳ್ಳರನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.