ಶನಿವಾರಸಂತೆ, ಏ. 12: ವೈಶಾಖ ಮಾಸದಲ್ಲಿ ಬೇಸಿಗೆ ಬೆಳೆಯಾದ ಹಸಿರು ಮೆಣಸಿನಕಾಯಿ ಘಾಟು ಗಾಳಿಯಲ್ಲಿ ಎಲ್ಲೆಡೆ ಹರಡಿದೆ. ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಈಗ ಹಸಿರು ಮೆಣಸಿನಕಾಯಿಯದ್ದೇ ಕಾರುಬಾರು, ಗುಂಟೂರು, ಉಲ್ಕಾ, ಎಸ್‍ಪಿಎಸ್, ಜಿ4, ಪ್ರಿಯಾಂಕ ಹೀಗೆ ತರಹೇವಾರಿ ಮೆಣಸಿನಕಾಯಿ ಸಂತೆಯಲ್ಲಿ ರಾರಾಜಿಸುತ್ತಿದೆ.

ಈ ಬಾರಿ ಹಸಿರು ಮೆಣಸಿನ ಕಾಯಿಗೆ ಉತ್ತಮ ಬೆಲೆ ಸಿಗುತ್ತಿದೆ. ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಪ್ರತಿವಾರ 15 ಕೆ.ಜಿ. ಮೆಣಸಿನಕಾಯಿ ತುಂಬಿದ ಚೀಲ ರೂ. 400-450 ರಂತೆ ಮಾರಾಟವಾಗುತ್ತಿದ್ದು ರೈತರು ಹರ್ಷ ಚಿತ್ತರಾಗಿದ್ದಾರೆ.

ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಪ್ರತಿವಾರ 7 ವಾರಗಳಿಂದ ಹಸಿರು ಮೆಣಸಿನಕಾಯಿ ಸಂತೆ ನಡೆಯುತ್ತಿದೆ. ಪ್ರತಿ ಸಂತೆಯಲ್ಲೂ 4-5 ಲೋಡ್ ಮೆಣಸಿನಕಾಯಿ ರಾಜ್ಯ - ಹೊರ ರಾಜ್ಯಕ್ಕೆ ರವಾನೆಯಾಗುತ್ತಿದೆ.

90 ರ ದಶಕದಿಂದ ಪ್ರಚಾರಕ್ಕೆ ಬಂದ ಬೇಸಿಗೆ ಕಾಲದ ಹಸಿರು ಮೆಣಸಿನಕಾಯಿ ಬೇಸಾಯ ರೈತರ ಸಂಕಷ್ಟಗಳನ್ನು ಪರಿಹರಿಸಿ, ಬದುಕನ್ನು ಹಸಿರಾಗಿಸಿದೆ. ಭತ್ತದ ಕೊಯ್ಲು ಮುಗಿದ ನಂತರ ಬೆಳೆಗಾರರು ಮಧ್ಯಂತರ ಬೆಳೆಯಾಗಿ ಮೆಣಸಿನ ಕಾಯಿ ಬೆಳೆಯುತ್ತಾರೆ. ಮಾರ್ಚ್, ಏಪ್ರಿಲ್‍ನಲ್ಲಿ ಫಸಲು ಆರಂಭ ಗೊಳ್ಳುತ್ತದೆ. ಉತ್ತಮ ಬೆಲೆ ದೊರೆತಲ್ಲಿ ಅತ್ಯಲ್ಪ ಸಮಯದಲ್ಲೇ ರೈತ ತನ್ನ ಕುಟುಂಬಕ್ಕೆ ವಾರ್ಷಿಕ ವರಮಾನ ಪಡೆಯುತ್ತಾರೆ. ಕೊಡಗು ಜಿಲ್ಲೆಯ ಉಳಿದೆಲ್ಲ ಮಾರುಕಟ್ಟೆÀಗಳಿಗಿಂತ ಶನಿವಾರಸಂತೆಯ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಹಸಿರು ಮೆಣಸಿನಕಾಯಿ ಬರುತ್ತಿದೆ. ಕೊಡಗಿನ ಗಡಿಭಾಗ ದಲ್ಲಿರುವ ಈ ಮಾರುಕಟ್ಟೆಗೆ ಜಿಲ್ಲೆಯಿಂದ ಮಾತ್ರವಲ್ಲದೇ ಪಕ್ಕದ ಹಾಸನ ಜಿಲ್ಲೆಯ ಹೆತ್ತೂರು, ಉಚ್ಚಂಗಿ, ವಣಗೂರು, ಬಿಸ್ಲೆ, ಹೊಂಗಡಹಳ್ಳ, ಚಂಗಡಹಳ್ಳಿ, ಇತ್ಯಾದಿ ಸ್ಥಳ ಗಳಿಂದಲೂ ಹಸಿ ಮೆಣಸಿನಕಾಯಿ ಮಾರಾಟಕ್ಕೆ ಬರುತ್ತದೆ. ಶನಿವಾರ ಸಂತೆಯಲ್ಲಿ ಹಿಂದೆ ತೊಂಭತ್ತರ ದಶಕದಲ್ಲಿ ಅತಿ ಹೆಚ್ಚು ಅಂದರೆ 80-120 ಲಾರಿಗಳಷ್ಟು ಮೆಣಸಿನಕಾಯಿ ಮಾರಾಟವಾಗುತ್ತಿತ್ತು. ಪ್ರಸ್ತುತ 4-5 ಲಾರಿಗಳಷ್ಟು ಮಾತ್ರ ಮೆಣಸಿನಕಾಯಿ ಸಾಗಣೆ ಆಗುತ್ತಿದೆ. ಬೆಂಗಳೂರು, ಹೈದರಾಬಾದ್, ತಮಿಳುನಾಡು, ಮುಂಬೈಗೂ ಹೋಗುತ್ತಿದೆ.

“ಈ ವರ್ಷ ಇದುವರೆಗೂ ಚೆನ್ನಾಗಿ ಮಳೆ ಬೀಳಲಿಲ್ಲ. ಮಾರ್ಚ್ ತಿಂಗಳಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆಯಿಂದ ಅನುಕೂಲವಾದರೂ ಇಳುವರಿ ಕಡಿಮೆ ಯಾಗಿದೆ. ರೈತರು ಜಲಮೂಲಗಳನ್ನು ಹುಡುಕಿ ಪಂಪ್‍ಸೆಟ್ ಮೂಲಕ ಬೆಳಿಗ್ಗೆ ನೀರು ಹಾಯಿಸುತ್ತಿದ್ದಾರೆ. 15-20 ಕೆ.ಜಿ. ಮೆಣಸಿನಕಾಯಿ ತುಂಬಿದ ಚೀಲಕ್ಕೆ 300-400 ದೊರೆಯುತ್ತದೆ. ಲಾಭ” ಎನ್ನುತ್ತಾರೆ ಮೂದರವಳ್ಳಿ ಗ್ರಾಮದ ರೈತ ಪವನ್‍ಕುಮಾರ್.

ಪವನ್‍ಕುಮಾರ್ ತಮ್ಮ 1 ಎಕರೆ ಗದ್ದೆಯಲ್ಲಿ 5 ಸಾವಿರ ಹೈಬ್ರಿಡ್ ‘ಪ್ರಗತಿ ಜಿ4’ ಮೆಣಸಿನ ಗಿಡಗಳನ್ನು ನೆಟ್ಟಿದ್ದು ರೂ. 15 ಸಾವಿರ ಖರ್ಚು ಮಾಡಿದ್ದಾರೆ. ದನದ ಗೊಬ್ಬರ ಹಾಕಿ ಸಾವಯವ ಕೃಷಿಕರಾಗಿರುವ ಇವರು ತಮ್ಮ ತಾಯಿ ಸುಭದ್ರಾ, ಸಹೋದರ ರಾದ , ಹರ್ಷ, ದಿಲೀಪ್, ವಿವೇಕ್, ದೊಡ್ಡಪ್ಪ ದೊಡ್ಡೇಗೌಡ ಅವರ ಸಹಕಾರದೊಂದಿಗೆ ಕೃಷಿಯಲ್ಲೇ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ.

“ಸಕಾಲಕ್ಕೆ ಮಳೆ ಬಾರದಿದ್ದರೆ ಗಿಡಗಳಿಗೆ ಅರಶಿನ ಮಂಡಿ, ಮುಜುಗು ರೋಗ, ಕೊಳೆರೋಗ, ಬೇರುಕಟ್ಟೆ ರೋಗ ತಗಲುವ ಸಂಭವ ಇದೆ. ಮಾರುಕಟ್ಟೆಯಲ್ಲಿ ಈ ಬಾರಿ ಸುಂಕವೂ ಅಧಿಕವಾಗಿದ್ದು ಚೀಲಕ್ಕೆ ರೂ. 3 ವಸೂಲಿ ಮಾಡುತ್ತಿದ್ದಾರೆ. ಮಾರುಕಟ್ಟೆ ಮಳೆಗಾಲದಲ್ಲಿ ಕೆಸರು ಮಯವಾಗುತ್ತದೆ. ಚಿಕ್ಕ ಮಳಿಗೆಗಳಿಂದ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ” ಎಂದು ಅಳಲು ತೋಡಿಕೊಳ್ಳುತ್ತಾರೆ ಅವರು.

ಮಧ್ಯಾವಧಿಯ ಬೆಳೆಯಾದ ಸಹರು ಮೆಣಸಿನಕಾಯಿ ಬೆಳೆ ರೈತರ ಮಳೆಗಾಲದ ಜೀವನ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಮದುವೆ, ಇತ್ಯಾದಿ ಶುಭ ಕಾರ್ಯಗಳೊಂದಿಗೆ ಮುಂದಿನ ಭತ್ತದ ವ್ಯವಸಾಯಕ್ಕೂ ಅನುಕೂಲವಾಗಿದೆ ಎಂಬದು ರೈತರ ಆಶಯ. ತೊಂಭತ್ತರ ದಶಕದಿಂದ ಪ್ರಚಾರಕ್ಕೆ ಬಂದ ಬೇಸಿಗೆ ಕಾಲದ ಈ ಬೇಸಾಯ ಅದೆಷ್ಟೋ ರೈತರ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಿ ಬದುಕನ್ನು ಹಸಿರಾಗಿಸಿದೆ. ಹಸಿರು ಮೆಣಸಿನಕಾಯಿ ಮಾರಾಟದಿಂದ ರೈತರು ಮನೆಕಟ್ಟಿಸಿದ್ದಾರೆ. ಮದುವೆ ಮಾಡಿದ್ದಾರೆ. ವರ್ಷಕ್ಕೆ ಆಗುವಷ್ಟು ಬೆಲ್ಲ, ಕಾಯಿ, ಅಕ್ಕಿ ಇತರ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಂಡಿರುತ್ತಿದ್ದರು.

2000 ವರ್ಷದ ಜೂನ್ ತಿಂಗಳಲ್ಲಿ ರೈತರು ಬೆಳೆದ ಹಸಿ ಮೆಣಸಿನ ಕಾಯಿಗೆ ಸರಿಯಾದ ಬೆಲೆ ದೊರಕದಿದ್ದುದರಿಂದ ಆಕ್ರೋಶಗೊಂಡ ರೈತರು ಅದನ್ನು ಮಾರುಕಟ್ಟೆ ಆವರಣದಲ್ಲಿ ಎಸೆದು ಹೋದ ಘಟನೆ ನಡೆದಿತ್ತು. 20 ಕೆ.ಜಿ. ಚೀಲವೊಂದಕ್ಕೆ ರೂ. 100 ರಷ್ಟು ಇದ್ದ ಬೆಲೆ ಅಪರಾಹ್ನ ವೇಳೆ ರೂ. 10 ಕ್ಕೆ ಇಳಿದಾಗ ತಮ್ಮ ಸಿಟ್ಟನ್ನು ಸಹಿಸಿಕೊಳ್ಳಲಾಗದ ರೈತರು ಅತ್ತ ವ್ಯಾಪಾರಿಗೆ ಮಾರಾಟ ಮಾಡದೆ, ಇತ್ತ ಮನೆಗೂ ಕೊಂಡೊಯ್ಯದೆ ಬೀದಿಗೆ ಬಿಸಾಕಿದ್ದರು. ಇದೀಗ ಪರಿಸ್ಥಿತಿ ಸುಧಾರಿಸಿದೆ.

- ನರೇಶ್‍ಚಂದ್ರ, ಶನಿವಾರಸಂತೆ