ಮಡಿಕೇರಿ, ಏ. 13: ಪಶ್ಚಿಮಘಟ್ಟ ಪ್ರದೇಶಗಳನ್ನು ವಿಶ್ವ ಪಾರಂಪರಿಕ ತಾಣ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಸಂಬಂಧ ರಚಿಸಲಾಗಿರುವ ಡಾ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವದನ್ನು ವಿರೋಧಿಸಿ ಇಲ್ಲಿನ ತಾಲೂಕು ಪಂಚಾಯಿತಿ ವತಿಯಿಂದ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.
ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ನಾಗೇಶ್ ಕುಂದಲ್ಪಾಡಿ ಮಲೆನಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ರೈತಾಪಿ ವರ್ಗದವರೇ ಹೆಚ್ಚಿಗೆ ನೆಲೆಸಿದ್ದು, ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ವಿಶ್ವಪಾರಂಪರಿಕ ತಾಣದ ಹೆಸರಿನಲ್ಲಿ ಓರ್ವ ವ್ಯಕ್ತಿಯ ಬದುಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಕಸ್ತೂರಿರಂಗನ್ ವರದಿ ಜಾರಿಯಾದರೆ ರೈತರ ಬದುಕು ದುಸ್ತರವಾಗಲಿದೆ. ಮನುಷ್ಯ ಮನುಷ್ಯನನ್ನೇ ಬೀದಿಗೆ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಯಾವದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದೆಂದು ಆಗ್ರಹಿಸಿದರು.
ಅಧ್ಯಕ್ಷೆ ಶೋಭಾ ಮೋಹನ್ ಮಾತನಾಡಿ ಕೊಡಗಿನ ಜನರು ಕಾಡನ್ನು ಬೆಳೆಸಿಕೊಂಡು ಉಳಿಸಿಕೊಂಡು ಬಂದಿದ್ದಾರೆ. ಪ್ರತಿ ಗ್ರಾಮಗಳಲ್ಲೀ ದೇವರ ಕಾಡುಗಳಿವೆ. ಕೊಡಗನ್ನು ನಾವು ಉಳಿಸಿಕೊಳ್ಳಬೇಕು. ಆದರೆ ಕಸ್ತೂರಿರಂಗನ್ ವರದಿ ಜಾರಿಯಾದರೆ ಎಲ್ಲರಿಗೂ ತೊಂದರೆಯಾಗಲಿದೆ. ಇದೀಗ ಶಾಸಕರುಗಳ ಸೂಚನೆಯಂತೆ ಪ್ರತಿ ಗ್ರಾ.ಪಂ.ಗಳಿಗೆ ವಿಶೇಷ ಸಭೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಪತ್ರ ಕಳುಹಿಸಲಾಗಿದೆ. ಅದರಂತೆ ತಾ.ಪಂ.ನಿಂದಲೂ ನಿರ್ಣಯ ಆಗಬೇಕಿದೆ. ಇಲ್ಲಿ ಪರ - ವಿರೋಧ ಚರ್ಚೆ ಬೇಡ. ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಬೇಕಿದೆ ಎಂದು ಹೇಳಿದರು. ಈ ಯೋಜನೆ ಪರಿಸರವಾದಿಗಳಿಂದ ಆಗುತ್ತಿಲ್ಲ. ಯುನೆಸ್ಕೋದಲ್ಲಿ ತಾಪಮಾನ ಏರಿಕೆಯಾಗಿರುವದರಿಂದ ಕೊಡಗಿನ ಪರಿಸರದ ಮೇಲೆ ಕಣ್ಣಿಟ್ಟಿದ್ದು, ಅವರುಗಳ ಲಾಭಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸದಸ್ಯ ಕೊಡಪಾಲು ಗಣಪತಿ ಮಾತನಾಡಿ, ಇದೊಂದು ರೀತಿಯಲ್ಲಿ ಕೊಡಗಿಗೆ ಅನ್ಯಾಯ ಮಾಡಿದಂತಾಗಿದೆ. ಕೊಡಗು ಕಾಫಿ ಕೃಷಿ ಅವಲಂಬಿತವಾಗಿದ್ದು, ಅದೆಷ್ಟೋ ಹೊರ ರಾಜ್ಯದ ಬಡವರಿಗೆ ಅನ್ನ ನೀಡುತ್ತಿದೆ. ವರದಿ ಜಾರಿಯಾದರೆ ಎಲ್ಲವೂ ನಾಶವಾಗಲಿದೆ. ಕೊಡಗು ಕೊಡಗಾಗೇ ಉಳಿಯಲಿ. ಪ್ರಾಕೃತಿಕವಾಗಿರುವ ಕೊಡಗು ಹೀಗೇ ಇರಲಿ. ವರದಿಯನ್ನು ಪ್ರಬಲವಾಗಿ ವಿರೋಧಿಸಬೇಕೆಂದು ಹೇಳಿದರು.
ಉಪಾಧ್ಯಕ್ಷ ಬೊಳಿಯಾಡಿರ ಸುಬ್ರಮಣಿ ಮಾತನಾಡಿ, ಹಲವಾರು ಗ್ರಾ.ಪಂ.ಗಳಲ್ಲಿ ಸಭೆ ನಡೆದಿದೆ. ಸಭೆ ಕಾಟಾಚಾರಕ್ಕೆ ನಡೆಸಿದಂತಾಗಿದೆ. ಸಭೆಯಲ್ಲಿ ಪಾಲ್ಗೊಂಡವರಿಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ವರದಿಯ ಒಳಿತು - ಕೆಡುಕುಗಳ ಬಗ್ಗೆ ಮೊದಲೇ ಮಾಹಿತಿ ನೀಡಬೇಕೆಂದು ಹೇಳಿದರು.
ಸದಸ್ಯ ದಬ್ಬಡ್ಕ ಶ್ರೀಧರ್ ಮಾತನಾಡಿ ಕೆಲವು ಕಡೆಗಳಲ್ಲಿ ಸಭೆ ನಡೆದಿಲ್ಲ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಣಾಧಿಕಾರಿಗಳು ಸೂಚನೆ ನೀಡಬೇಕು. ಪಶ್ಚಿಮಘಟ್ಟ ತಾಣಕ್ಕೆ ಪರಿಸರವಾದಿಗಳು ಅವರುಗಳ ಜಾಗವನ್ನು ಸೇರಿಸಿಕೊಳ್ಳಲಿ. ಬಡವರ ಜಾಗ ಸೇರಿಸಿಕೊಂಡರೆ ನಾವೆಲ್ಲಿಗೆ ಹೋಗುವದು. ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶವನ್ನು ಮೊದಲು ಉಳಿಸಿಕೊಳ್ಳಲಿ ಎಂದು ಹೇಳಿದರು.
ವಿಪಕ್ಷ ಸದಸ್ಯ ಬಿ.ವೈ. ಅಪ್ಪು ರವೀಂದ್ರ, ಕಸ್ತೂರಿ ರಂಗನ್ ವರದಿಗೆ ವಿರುದ್ಧ ಖಂಡನಾ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸುವಂತೆ ಹೇಳಿದರು.
ಅಂತಿಮವಾಗಿ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಸದಸ್ಯರುಗಳಾದ ತುಂತಜೆ ಕುಮುದ ರಶ್ಮಿ ಇಂದಿರಾ, ಸಂಧ್ಯಾ ಇದ್ದರು. ಕಾರ್ಯನಿರ್ವಹಣಾಧಿಕಾರಿ ಜೀವನ್ ಕುಮಾರ್ ಸ್ವಾಗತಿಸಿ, ವಂದಿಸಿದರು.