ಮಡಿಕೇರಿ, ಏ. 13: ಕೊಡವ ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊಂಡ ಮೂರು ವರ್ಷಗಳ ನಂತರ ಆರಂಭಗೊಂಡ ಕೌಟುಂಬಿಕ ಕ್ರಿಕೆಟ್ ಉತ್ಸವಕ್ಕೆ ಇದೀಗ 18ನೇ ವರ್ಷ. ಕಳೆದ 17 ವರ್ಷಗಳ ಕ್ರಿಕೆಟ್ ಉತಸವದಲ್ಲಿ ಬಾಳೆಲೆ ಪಟ್ಟಣದಲ್ಲಿ ಈತನಕ ನಾಲ್ಕು ಪಂದ್ಯಾಟ ನಡೆದಿದ್ದು, ಇದೀಗ ಐದನೇ ಉತ್ಸವಕ್ಕೆ ಬಾಳೆಲೆ ಸಜ್ಜಾಗುತ್ತಿದೆ. ಈ ಹಿಂದೆ ಕಾಂಡೆರ, ಬಲ್ಲಿಮಾಡ, ಅಡ್ಡೇಂಗಡ ಹಾಗೂ ಕೊಕ್ಕೇಂಗಡ ಕುಟುಂಬಗಳು ಕ್ರಿಕೆಟ್ ಉತ್ಸವ ಆಯೋಜಿಸಿದ್ದು, ಇದೀಗ ಅಳಮೇಂಗಡ ಕುಟುಂಬಸ್ಥರು ಪಂದ್ಯಾವಳಿ ನಡೆಸುತ್ತಿದ್ದಾರೆ.ಅಳಮೇಂಗಡ ಕಪ್‍ಗೆ 220 ಕುಟುಂಬಗಳು ಹೆಸರು ನೋಂದಾಯಿಸಿ ಕೊಂಡಿದ್ದು, ತಾ. 24ರಿಂದ ಪಂದ್ಯಾಟ ಆರಂಭಗೊಳ್ಳಲಿದೆ. ಬಾಳೆಲೆ ವಿಜಯ ಲಕ್ಷ್ಮಿ ಕಾಲೇಜು ಮೈದಾನದಲ್ಲಿ ಪಂದ್ಯಾಟ ಜರುಗಲಿದ್ದು, ಎರಡು ಮೈದಾನಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಉತ್ಸವ ಸಮಿತಿ ಪ್ರಮುಖ ಅಳಮೇಂಗಡ ಬೋಸ್ ಮಂದಣ್ಣ ತಿಳಿಸಿದ್ದಾರೆ.

ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟ

ಮಡಿಕೇರಿ : ಅಮ್ಮತ್ತಿ-ಕಾರ್ಮಾಡು ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ತಾ. 14 ರಿಂದ (ಇಂದಿನಿಂದ) ತಾ. 16 ರವರೆಗೆ ಅಮ್ಮತ್ತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಜ್ಯಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಲಾಗಿದೆ.