ಶನಿವಾರಸಂತೆ, ಏ. 13: ಶನಿವಾರಸಂತೆ ಸಮೀಪದ ಮೆಣಸ ಗ್ರಾಮದ ತಪೋವನ ಮನೆಹಳ್ಳಿ ಮಠದ ಶ್ರೀ ಗುರು ಗವಿಸಿದ್ದ ವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.

ಚೈತ್ರ ಬಹುಳ ತದಿಗೆ ದಿನ ಬೆಳಿಗ್ಗೆ ಶ್ರೀ ಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿ ಪ್ರೀತ್ಯರ್ಥ ದಗ್ಗಳ ಅಗ್ನಿಕೊಂಡೋತ್ಸವ ಸೇವೆ ನಡೆಯಿತು.

ಜಾತ್ರಾ ಮಹೋತ್ಸವದ ಮೊದಲಿಗೆ ಸಣ್ಣ ಚಂದ್ರಮಂಡಲೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ಪ್ರಸನ್ನ, ತಪೋವನೇಶ್ವರಿ ಅಮ್ಮನವರಿಗಾಗಿ ಮುತ್ತೈದೆ ಸೇವೆ ನಡೆಯಿತು. ಸುಮಂಗಲೆಯರ ಮಡಿಲು ತುಂಬಿಸುವ ಕಾರ್ಯಕ್ರಮದಲ್ಲಿ ನೂರಾರು ಮಂದಿ ಮುತ್ತೈದೆಯರು ಪಾಲ್ಗೊಂಡು ಅರಿಶಿನ, ಕುಂಕುಮ ಸ್ವೀಕರಿಸಿದರು. ಮಧ್ಯಾಹ್ನ ದೊಡ್ಡ ಚಂದ್ರಮಂಡಲೋತ್ಸವ ನಡೆಯಿತು.

ಸಂಜೆ ಪಲ್ಲಕ್ಕಿ ಉತ್ಸವದೊಂದಿಗೆ ಸ್ವಾಮಿಯವರ ರಥೋತ್ಸವ ನಡೆಯಿತು. ರಥಾರೂಢ ಸ್ವಾಮಿಯವರಿಗೆ ಚಲುವರಾಯ ಸ್ವಾಮಿಯವರಿಂದ ಚಾಮರಸೇವೆ, ಮಹಾಮಂಗಳಾರತಿ ನಡೆಯಿತು. ಬಳಿಕ ಸ್ವಾಮಿಯವರ ಮಹಾ ರಥೋತ್ಸವ ನಡೆದು ರಾತ್ರಿ ವೃಷಭಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು.

ತಪೋವನದ ಕ್ಷೇತ್ರಾಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಗುರುಸಿದ್ಧ ವೀರೇಶ್ವರ ಟ್ರಸ್ಟ್ ಗೌರವ ಅಧ್ಯಕ್ಷ ಜಯದೇವ ಸ್ವಾಮೀಜಿ, ಮೈಸೂರಿನ ಬರದನ ಮಠದ ಪರಶಿವಮೂರ್ತಿ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಧರ್ಮೋಪದೇಶ ನೀಡಿದರು.

ಮೆಣಸ ಮನೆಹಳ್ಳಿ, ಅಂಕನಹಳ್ಳಿ ಮತ್ತಿತರ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಜಾತ್ರಾ ಮಹೋತ್ಸವ ಹಾಗೂ ಪೂಜಾ ಕಾರ್ಯಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಸೋಮವಾರಪೇಟೆ

ಗಾಂಧಿನಗರದಲ್ಲಿರುವ ಶ್ರೀ ದೊಡ್ಡಮಾರಿಯಮ್ಮ ದೇವಾಲಯದ ವಾರ್ಷಿಕ ಮಹಾ ಪೂಜೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಸಂಪನ್ನ ಗೊಂಡಿದ್ದು, ತಾ. 14ರಂದು (ಇಂದು) ಶಾಂತಿಪೂಜೆಯ ಮೂಲಕ ಪ್ರಸಕ್ತ ಸಾಲಿನ ಉತ್ಸವಕ್ಕೆ ತೆರೆಬೀಳಲಿದೆ.

ಕಳೆದ ಭಾನುವಾರದಂದು ದೇವಾಲಯದಲ್ಲಿ ಹೋಮ ಪೂಜೆ ಯೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಿದ್ದು, ನಂತರ ಬಲಿ ಪೂಜೆ, ದೊಡ್ಡಮಾರಿಯಮ್ಮ ದೇವರ ಉತ್ಸವ ಮೂರ್ತಿಯ ಮೆರವಣಿಗೆ, ಜ್ಯೋತಿ ಪೂಜೆ ನಡೆಸಲಾಯಿತು.

ನಿನ್ನೆ ಮಧ್ಯಾಹ್ನ ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಸಂಜೆ ದೇವಾಲಯದ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ತಾ. 14ರಂದು ಸಂಜೆ 5 ಗಂಟೆಗೆ ಶಾಂತಿಪೂಜೆ ನಡೆಯಲಿದ್ದು, ಪ್ರಸಕ್ತ ಸಾಲಿನ ಉತ್ಸವಕ್ಕೆ ತೆರೆಬೀಳಲಿದೆ.