ಮೂರ್ನಾಡು, ಏ. 12: ಅನೇಕ ವರ್ಷಗಳಿಂದ ಪಾಳು ಬಿದ್ದಿದ್ದ ನೀರಿನ ತೊಟ್ಟಿಯನ್ನು ಗ್ರಾಮ ಪಂಚಾಯಿತಿ ಸದಸ್ಯರು ಸ್ವಂತ ಖರ್ಚಿನಲ್ಲಿ ಶುದ್ಧಗೊಳಿಸಿ ನೀರಿನ ಸಮಸ್ಯೆಯನ್ನು ನೀಗಿಸಿದ್ದಾರೆ.

ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಕೆರೆ ಬಳಿ ಜಲ ಇರುವ ಹಿನ್ನೆಲೆ ಸಾರ್ವಜನಿಕರಿಗೆ ಬಟ್ಟೆ ಒಗೆಯುವ ಸಲುವಾಗಿ ಗ್ರಾಮ ಪಂಚಾಯಿತಿಯಿಂದ ಬಹಳ ವರ್ಷಗಳ ಹಿಂದೆ ತೊಟ್ಟಿ ನಿರ್ಮಿಸಲಾಯಿತು. ಮೂರ್ನಾಡು ಪಟ್ಟಣದ ನಿವಾಸಿಗಳು ತೊಟ್ಟಿ ನೀರಿನ ಉಪಯೋಗ ಪಡೆದು ಕೊಳ್ಳುತ್ತಿದ್ದರು. ಆದರೆ ಕಳೆದ ಹತ್ತು ವರ್ಷಗಳಿಂದ ನಿರ್ವಹಣೆ ಕೊರತೆಯಿಂದಾಗಿ ನೀರಿನ ತೊಟ್ಟಿ ಕೆಸರು, ಗಿಡಗಂಟಿಗಳು ತುಂಬಿ ಕೊಂಡು ಪಾಳು ಬಿದ್ದಿತ್ತು. ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ಸಾದಿಕ್ ಅವರು ಬೇಸಿಗೆಯಲ್ಲಿ ನೀರಿನ ಬವಣೆಯನ್ನು ಅರಿತು ತಮ್ಮ ಸ್ವಂತ ಖರ್ಚಿನಿಂದ ತೊಟ್ಟಿಯನ್ನು ದುರಸ್ತಿಗೊಳಿಸಿದ್ದಾರೆ. ತೊಟ್ಟಿಯ ಒಳ ಭಾಗದಲ್ಲಿ ಇದ್ದ ಕೆಸರು, ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಿ, ಸುಣ್ಣ-ಬಣ್ಣ ಬಳಿಯಲಾಗಿದೆ. ಕೆರೆ ಸಮೀಪದಲ್ಲಿ ಹತ್ತಾರು ಕುಟುಂಬಗಳು ವಾಸಿಸುತ್ತಿದ್ದು, ಈ ಭಾಗದ ನಿವಾಸಿಗಳಿಗೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ನೀರಿಗಾಗಿ ಅಲೆ ದಾಡುವ ಪರಿಸ್ಥಿತಿ ಉಂಟಾಗುತ್ತದೆ. ನಿರಂತರ ನೀರಿನ ಸೆಲೆ ಇರುವ ತೊಟ್ಟಿಯಲ್ಲಿ ಬೇಸಿಗೆಯಲ್ಲಿ ನೀರು ಬತ್ತಿ ಹೋಗದೆ ಇರುವದರಿಂದ ಈ ಭಾಗದ ನಿವಾಸಿಗಳಿಗೆ ಅನುಕೂಲ ವಾಗುತ್ತದೆ. ಬಟ್ಟೆ ಒಗೆಯಲು ಮನೆ ಬಳಕೆಗೆ ಈ ನೀರನ್ನು ಉಪಯೋಗಿಸ ಬಹುದು ಎಂಬ ಉದ್ದೇಶದಿಂದ ಈ ತೊಟ್ಟಿಯನ್ನು ತನ್ನ ಸ್ವಂತ ಖರ್ಚಿನಿಂದ ಸ್ವಚ್ಛಗೊಳಿಸಲಾಗಿದೆ ಎಂದು ಎಂ.ಎಂ. ಸಾದಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.