ಮಡಿಕೇರಿ, ಏ.12: ಕೊಡಗು ಜಿಲ್ಲಾ ಜನಪದ ಪರಿಷತ್ ಮತ್ತು ಮಡಿಕೇರಿ ತಾಲೂಕು ಜನಪದ ಪರಿಷತ್ ಜಂಟಿ ಆಶ್ರಯದಲ್ಲಿ ವಿಶ್ವಕಲಾ ದಿನದ ಅಂಗವಾಗಿ ತಾ. 15 ರಂದು ಮಡಿಕೇರಿಯ ರಾಜಾಸೀಟ್‍ನಲ್ಲಿ ಕುಂಚ ಗಾಯನ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಜಿಲ್ಲೆಯ ಖ್ಯಾತ ಚಿತ್ರಕಲಾವಿದ , ರಾಜ್ಯಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಬಿ.ಆರ್.ಸತೀಶ್ ಮತ್ತು ವೀರಾಜಪೇಟೆಯ ಕಲಾವಿದ ಟಿ.ಡಿ.ಮೋಹನ್ ನೇತೃತ್ವದಲ್ಲಿ ಕುಂಚ -ಗಾಯನ ಕಾರ್ಯಕ್ರಮವನ್ನು ತಾ.15 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ರಾಜಾಸೀಟ್ ಉದ್ಯಾನವನದಲ್ಲಿ ಆಯೋಜಿಸಲಾಗಿದೆ. ಅದೇ ವೇಳೆಯಲ್ಲಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನೂ ರಾಜಾಸೀಟ್‍ನಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
3 ರಿಂದ 5,6 ರಿಂದ 10, 11 ರಿಂದ 15 ವಯೋಮಾನದ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು
(ಮೊದಲ ಪುಟದಿಂದ)ಗ್ರಾಮೀಣ ಜನಪದ ಎಂಬ ವಿಷಯದ ಬಗ್ಗೆ ಆಯೋಜಿಸಲಾಗಿದ್ದು ಪ್ರತೀ ವಿಭಾಗಕ್ಕೂ ಬಹುಮಾನ ನೀಡಲಾಗುತ್ತದೆ. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಚಿತ್ರಕಲೆಗೆ ಅಗತ್ಯವಾದ ಪರಿಕರಗಳನ್ನು ತಾವೇ ತರಬೇಕು ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದರು. ಕುಂಚಗಾಯನ ಸ್ಪರ್ಧೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಸತೀಶ್ ಕುಮಾರ್ ಉದ್ಘಾಟಿಸಲಿದ್ದು ಮಕ್ಕಳಿಗೆ ಚಿತ್ರಕಲಾ ಸ್ಪಧೆರ್Éಯನ್ನು ಮಡಿಕೇರಿ ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ವಿಶ್ವಚಿತ್ರಕಲಾ ದಿನಾಚರಣೆ ಬಗ್ಗೆ ಮಾಹಿತಿ ನೀಡಿದ ಜಿಲ್ಲೆಯ ಹೆಸರಾಂತ ಚಿತ್ರಕಲಾವಿದ ಬಿ.ಆರ್.ಸತೀಶ್, ವಿಶ್ವದ ದೇಶಗಳು ಸೇರಿ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಅಧ್ಯಕ್ಷ ಮೆಕ್ಸಿಕೋಸಾ ಮಾರಿಯಾ ಇವರೊಂದಿಗೆ ಜಗತ್ತಿನ 150 ಕಲಾವಿದರ ಬೆಂಬಲದೊಂದಿಗೆ 2012 ರ ಏಪ್ರಿಲ್ 15 ರಂದು ಮೊದಲ ಬಾರಿಗೆ ವಿಶ್ವಮಟ್ಟದಲ್ಲಿ ಕಲಾ ದಿನ ಆಚರಿಸಲಾಗಿತ್ತು. ಅಂದಿನಿಂದ ಪ್ರತೀ ವರ್ಷ ಏಪ್ರಿಲ್ 15 ರಂದು ವಿಶ್ವಕಲಾ ದಿನ ಆಚರಿಸಲ್ಪಡುತ್ತಿದೆ ಎಂದರು. ಈ ದಿನವನ್ನು ವಿಶ್ವದ ಶ್ರೇಷ್ಠ ಚಿತ್ರಕಲಾವಿದರಲ್ಲಿ ಒಬ್ಬರಾದ ಲಿಯೋನಾರ್ಡ್ ಡಾವಿನ್ಸಿಯ ಜನ್ಮದಿನದ ಗೌರವಾರ್ಥವಾಗಿ ಎಲ್ಲಾ ಚಿತ್ರಕಲಾವಿದರು ಸೇರಿ ವಿಶ್ವಕಲಾದಿನವಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಡಾವಿನ್ಸಿಯ ಕುಂಚದಲ್ಲಿ ಅರಳಿದ ಮೊನಾಲಿಸಾ ಚಿತ್ರ ಚಿತ್ರಕಲಾವಿದರ ಪಾಲಿಗೆ ಸದಾ ಹಚ್ಚಹಸಿರಿನಂತಾಗಿದೆ ಎಂದು ಸತೀಶ್ ವಿವರಿಸಿದರು. ಶನಿವಾರ ರಾಜಾಸೀಟ್ ನಲ್ಲಿ ಕುಂಚ -ಗಾನ ಕಾರ್ಯಕ್ರಮದ ಮೂಲಕ ಶ್ರೇಷ್ಠ ಚಿತ್ರಕಲಾಕಾರನಿಗೆ ಗೌರವ ಅರ್ಪಿಸಲಾಗುತ್ತದೆ ಶನಿವಾರದಂದು ವಿಶ್ವಕಲಾ ದಿನದಲ್ಲಿ ಡಾವಿನ್ಸಿಯ ಚಿತ್ರಕಲೆಯನ್ನು ವಿಶೇಷವಾಗಿ ರೂಪಿಸಲಾಗುತ್ತದೆ ಎಂದೂ ಸತೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಾನಪದ ಮ್ಯೂಸಿಯಂ ಸ್ಥಾಪನೆ ನಿಟ್ಟಿನಲ್ಲಿ ಸೂಕ್ತ ಕಟ್ಟಡಕ್ಕಾಗಿ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುತ್ತಿದೆ. ಮ್ಯೂಸಿಯಂ ಸ್ಥಾಪನೆಯಾದಲ್ಲಿ ಜಿಲ್ಲೆಯ ಜನಪದೀಯರಿಗೆ ಅಮೂಲ್ಯ ಪರಿಕರಗಳ ಸಂಗ್ರಹಕ್ಕೆ ಅನುಕೂಲವಾಗಲಿದೆ. ಹಳೇ ಕಾಲದ ಅಪೂರ್ವ ಪರಿಕರಗಳೂ ಮುಂದಿನ ಪೀಳಿಗೆಗೆ ಹಳೇ ಕಾಲದ ಇತಿಹಾಸದ ಸಾಕ್ಷಿಯಾಗಿ ದೊರಕಲಿದೆ ಎಂದರು.
ಖಚಾಂಚಿ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ, ಜಾನಪದ ಪರಿಷತ್ ಸದಸ್ಯತ್ವ ಅಭಿಯಾನವನ್ನು ಶೀಘ್ರದಲ್ಲಿಯೇ ಆರಂಭಿಸಿ ಜಿಲ್ಲೆಯಾದ್ಯಂತ ಪರಿಷತ್‍ಗೆ ಸದಸ್ಯರನ್ನು ನೋಂದಣಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಕೊಡಗಿನ ಜಾನಪದ ಕಲಾವಿದರಿಗೆ ಈಗಾಗಲೇ ಪರಿಷತ್ ವತಿಯಿಂದ ಕ್ಷೇಮಾಭಿವೃದ್ಧಿ ನಿಧಿ ಪ್ರಾರಂಭಿಸಲಾಗಿದೆ ಎಂದು ಸಂಪತ್ ಕುಮಾರ್ ತಿಳಿಸಿದರು.
ರಾಜ್ಯ ಜಾನಪದ ಪರಿಷತ್‍ನಿಂದ ಈಗಾಗಲೇ ರಾಜ್ಯಮಟ್ಟದ ಜಾನಪದ ಉತ್ಸವದಲ್ಲಿ ಕೊಡಗಿನ ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಬಾಚರಣಿಯಂಡ ಅಪ್ಪಣ್ಣ ಅವರನ್ನು ಸನ್ಮಾನಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜೂನ್ 6 ರಂದು ಜಾನಪದ ಪರಿಷತ್ ವಾರ್ಷಿಕೋತ್ಸವ ಸಂದರ್ಭ ಗೋಣಿಕೊಪ್ಪಲುವಿನ ಜಾನಪದ ಕಲಾವಿದರೂ ಆಗಿರುವ ಡಾ.ಶಿವಣ್ಣ, ಮಡಿಕೇರಿಯ ಬೈತಡ್ಕ ಜಾನಕಿ, ಕೂಡಿಗೆಯ ಹಿರಿಯ ಜನಪದ ಸಂಗೀತಗಾರ ಹರದಯ್ಯ ಅವರನ್ನು ಸನ್ಮಾನಿಸಲಾಗುತ್ತದೆ. ರಾಮನಗರದಲ್ಲಿ ನಡೆದ ರಾಜ್ಯ ಜಾನಪದ ಮೇಳದಲ್ಲಿ ಕೊಡಗಿನಿಂದ ಹಿರಿಯ ಕಲಾವಿದರಾದ ರಾಣಿಮಾಚಯ್ಯ, ಗೌರು ನಂಜಪ್ಪ ಕೊಡಗಿನ ಜನಪದ ರಾಯಭಾರಿಗಳಾಗಿ ಪಾಲ್ಗೊಂಡಿದ್ದರು ಎಂದು ಅನಂತಶಯನ ಮಾಹಿತಿ ನೀಡಿದರು. ಕೊಡಗಿನಲ್ಲಿ ಜಾನಪದ ಪರಿಷತ್ ಘಟಕ ಪ್ರಾರಂಭವಾಗಿ 10 ತಿಂಗಳುಗಳು ಕಳೆದಿದ್ದು ಮಹತ್ವದ 10 ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸೋಮವಾರಪೇಟೆ ಹೋಬಳಿ ಘಟಕ ಕೂಡ ಪ್ರಾರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಶನಿವಾರಸಂತೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹೋಬಳಿ ಘಟಕ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.