ಜಮ್ಮಾ..., ಗುಮ್ಮಾ..., ಕಸ್ತೂರಿರಂಗನ್..., ಕೋವಿ ಹಕ್ಕು...., ಟಿಪ್ಪು ಗಲಭೆ... ಹೀಗೆ ಹತ್ತು ಹಲವು ನಿದ್ದೆಗೆಡಿಸಿರುವ ಘಟನೆಗಳೊಂದಿಗೆ ಕೊಡಗಿಗೆ ಇದೊಂದು ಹೊಸ ಸೇರ್ಪಡೆ.

ಕೊಡಗು ಜಿಲ್ಲೆಯಲ್ಲಿ ಜೀತ ಪದ್ಧತಿ ಜೀವಂತವಾಗಿದೆ; ಈ ಬಗ್ಗೆ ವರದಿ ಸಂಗ್ರಹಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುವದು ಎಂದು ಕಂದಾಯ ಸಚಿವರು ಫರ್ಮಾನು ಹೊರಡಿಸಿದ್ದಾರೆ!

ಸರಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಿದವರು ಯಾರು? ಈ ಬಗ್ಗೆ ಜಿಲ್ಲೆಯಲ್ಲಿ ಎಷ್ಟು ದೂರು ದಾಖಲಾಗಿವೆ ? ಎಂಬ ಮಾಹಿತಿ ಜಿಲ್ಲೆಯವರಿಗಂತೂ ಇಲ್ಲ.

ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ಬಾಳುತ್ತಿರುವ ತೋಟ ಮಾಲೀಕರು ಮತ್ತು ಕಾರ್ಮಿಕರ ನಡುವೆ ಸಂಘರ್ಷ ಏರ್ಪಡಿಸಿ ಜನರ ನೆಮ್ಮದಿ ಕೆಡಿಸಲು ಹುನ್ನಾರಗಳು ನಡೆಯುತ್ತಿವೆಯೇ? ಎಂಬ ಶಂಕೆ ಇಂತಹ ಸಂದರ್ಭಗಳಲ್ಲಿ ಮೂಡುತ್ತವೆ.

ಕೊಡಗಿನಲ್ಲಿ ತೋಟ ಕಾರ್ಮಿಕರ ಸ್ಥಿತಿ ತೀರಾ ಉನ್ನತ ಮಟ್ಟದಲ್ಲಿದೆ ಎಂದು ಹೇಳುವದು ಸುಳ್ಳಾದರೂ, ಉತ್ತರ ಕರ್ನಾಟಕ ಅಥವಾ ದೇಶದ ಇತರ ಭಾಗಗಳ ಕಾರ್ಮಿಕರ ಬದುಕಿಗಿಂತ ಉತ್ತಮವಾಗಿದೆ.

ಜೀತ ಪದ್ಧತಿಯಲ್ಲೇ ಕಾರ್ಮಿಕರನ್ನು ನೋಡಿಕೊಳ್ಳುವದಾಗಿದ್ದರೆ ಅಸ್ಸಾಂ ಕೆಲಸದವರನ್ನು ಏಕೆ ತೋಟ ಮಾಲೀಕರು ಇಂದು ಅವಲಂಭಿಸಬೇಕಿತ್ತು?

ಯಾಕಾಗಿ ದಾವಣಗೆರೆ, ಶಿವಮೊಗ್ಗ, ಕೆ.ಆರ್.ನಗರ, ಬಳ್ಳಾರಿ ಹಾಗೂ ಇತರ ಪ್ರದೇಶಗಳಿಂದ ಕಾರ್ಮಿಕರು ಕೊಡಗಿನ ತೋಟಗಳಲ್ಲಿ ಕೆಲಸ ಅರಸಿ ಬರುತ್ತಿದ್ದಾರೆ? ಕಡಿಮೆ ಸಂಬಳ ಕೊಟ್ಟು ಅವರನ್ನು ಜೀತದಾಳುಗಳಂತೆ ನೋಡಿಕೊಳ್ಳುತ್ತಿದ್ದರೆ, ಪ್ರತಿ ವರ್ಷ ಅವರ ಆರ್ಥಿಕ ಸ್ಥಿತಿ ಬೆಳೆಯಲು ಯಾಕೆ ಕೊಡಗನ್ನೇ ಆಶ್ರಯಿಸುತ್ತಿದ್ದರು? ಹೊರಗಿನಿಂದ ಬಂದ ಎಷ್ಟು ಜನ ಕಾರ್ಮಿಕರು ತಮಗೆ ಇಲ್ಲಿ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿದ್ದಾರೆ? ಎಷ್ಟು ಮಂದಿ ದೂರಿತ್ತಿದ್ದಾರೆ?

ವರ್ಷಂಪ್ರತಿ ಕಾರ್ಮಿಕರ ವೇತನ ಏರಿಕೆಯಾಗುತ್ತಲೇ ಇದೆ. ಕಾಫಿ ಕೊಯ್ಲು ಅಥವಾ ತೋಟದ ಇತರ ನಿರ್ವಹಣೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವವರು ಕೂಡ ಕಡಿಮೆ ದರಕ್ಕೇನೂ ಒಪ್ಪುತ್ತಿಲ್ಲ; ಅದರ ಅಗತ್ಯ ಕೂಡಾ ಇಲ್ಲ. ಹಾಗಾಗಿ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಅದೇ ಮಾಲೀಕನದು?

ಅಂತಾರಾಷ್ಟ್ರೀಯ ಮಟ್ಟದಲ್ಲಿ ದರವನ್ನು ಅವಲಂಭಿಸಿದ ಕಾಫಿ ಮಾರುಕಟ್ಟೆಯಿಂದಾಗಿ ಬೆಳೆಗಾರನಿಗೆ ದರದ ಬಗ್ಗೆ ಯಾವದೇ ಮುನ್ಸೂಚನೆ ಇರುವದಿಲ್ಲ. ಪಾರಂಪರಿಕವಾಗಿ ಬೇಸಾಯ ಮಾಡಿಕೊಂಡಂತೆ ಈ ಕೃಷಿಯನ್ನು ಮುಂದುವರಿಸಿಕೊಂಡು ಬರುವ ಕಾಫಿ ತೋಟ ಮಾಲೀಕರು ಕಾಫಿ ಫಸಲು ತೆಗೆದ ನಂತರವೂ ಆತಂಕದಲ್ಲೇ ಅದನ್ನು ಶೇಖರಿಸಿ ಇಡುವ ಪರಿಸ್ಥಿತಿ ಮಾರುಕಟ್ಟೆಯ ಏರಿಳಿತದಿಂದ ಪ್ರತಿವರ್ಷ ನಾವು ಕಾಣುತ್ತಿದ್ದೇವೆ.

ಪ್ರಕೃತಿಯ ವಿಕೋಪ, ಆರ್ಥಿಕ ಸಮಸ್ಯೆ, ಕಾರ್ಮಿಕರ ಅಲಭ್ಯ.. ಹೀಗೆ ಹಲವು ಕಾರಣಗಳಿಂದಾಗಿ ನೂರಾರು ಮಂದಿ ತೋಟಗಳನ್ನು ಗುತ್ತಿಗೆಗೆ ನೀಡಿರುವದು, ನೀಡುತ್ತಿರುವದನ್ನು ಕಾಣುತ್ತಿದ್ದೇವೆ. ಕಾಫಿ ಕೊಯ್ಲಿಗೆ ಕೂಡಾ ಕಾರ್ಮಿಕರ ಸಮಸ್ಯೆಯಿಂದಾಗಿ ಹಸಿ ಕಾಫಿಯನ್ನೇ ಗಿಡದಿಂದಲೇ ಮಾರಾಟ ಮಾಡುವ ಹೊಸ ಪರಿಸ್ಥಿತಿ ಇತ್ತೀಚೆಗೆ ಉಂಟಾಗಿದೆ.

ಕಾರ್ಮಿಕರಿಗೆ ಮನೆ, ಮನೆಯಲ್ಲಿ ಟಿವಿ, ಮಕ್ಕಳಿಗೆ ವಿದ್ಯಾಭ್ಯಾಸ ಉತ್ತಮ ಪರಿಸರಗಳನ್ನು ಕಲ್ಪಿಸುವ ಹೃದಯವಂತರೂ ಕೊಡಗಿನಲ್ಲಿ ಇದ್ದಾರೆ.

ಅಪರೂಪದ ಅಪರಾಧ ಪ್ರಕರಣ ಯಾವ ಕ್ಷೇತ್ರಗಳಲ್ಲಿ ಇಲ್ಲ? ಕಾರ್ಮಿಕರಿಗೆ ತೊಂದರೆ ಉಂಟಾದ ಹಲವು ಪ್ರಕರಣಗಳಷ್ಟೇ ಪ್ರಮಾಣದಲ್ಲಿ ಮಾಲೀಕರೂ ಕೂಡಾ ಆರ್ಥಿಕ ನಷ್ಟ ಹಾಗೂ ಮಾನಸಿಕ ನೆಮ್ಮದಿ ಕಳೆದುಕೊಂಡ ಅನುಭವಗಳೂ ಎಲ್ಲೆಡೆಯಂತೆ ಇಲ್ಲಿಯೂ ಇವೆ.

ನೆಮ್ಮದಿಯಿಂದ ಬದುಕುತ್ತಿರುವ ತೋಟ ಮಾಲೀಕ - ಕಾರ್ಮಿಕರ ನಡೆವೆ ವಿಷಬೀಜ ಬಿತ್ತಿ ಪ್ರಚಾರ ಪಡೆಯುವ ಪ್ರಯತ್ನಗಳಿಗೆ ಅಂತ್ಯ ಬೀಳಬೇಕಿದೆ. ‘ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ’ ಎನ್ನುವ ಮಾತಿನ ಅರ್ಥವನ್ನು ಮಾಲೀಕ ಹಾಗೂ ಕಾರ್ಮಿಕ ವರ್ಗ ಈ ಸಂದರ್ಭದಲ್ಲಿ ಮನನ ಮಾಡಿಕೊಳ್ಳಲಿ.

ಕೊಡಗಿನ ಜನರ ಭಾವನೆಗಳ ಮಧ್ಯೆ ಹುಳಿ ಹಿಂಡುವ ಕೆಲಸ ನಿಲ್ಲಬೇಕಿದೆ.

ಯಾರದೋ ಮಾತನ್ನು ವೇದವಾಕ್ಯ ಎಂದು ನಂಬಿ ಬೆಂಗಳೂರಿನಲ್ಲಿ ಕುಳಿತು ಫರ್ಮಾನು ಹೊರಡಿಸುವ ಕೆಲಸವನ್ನು ಸರ್ಕಾರ ಕೂಡಾ ನಿಲ್ಲಿಸಲಿ.

ಅಣ್ಣ ತಮ್ಮಂದಿರಂತೆ ಇರುವ ಮಾಲೀಕರು ಹಾಗೂ ಕಾರ್ಮಿಕರನ್ನು ನೆಮ್ಮದಿಯಿಂದ ಬದುಕಲು ಬಿಡಲಿ.