ಸೋಮವಾರಪೇಟೆ, ಏ.13: ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳ ಮೇಲೆ ಹಿಡಿತ ಸಾಧಿಸಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರಕಿಸಿ ಕೊಡುವಲ್ಲಿ ತಾ.ಪಂ. ಅಧ್ಯಕ್ಷೆ ವಿಫಲರಾ ದಂತೆ ಕಂಡುಬರುತ್ತಿದ್ದು, ಇಂದು ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ಅವರೇ ಬಹಿಷ್ಕರಿಸುವ ಮೂಲಕ ತಮ್ಮ ಅಸಹಾಯಕತೆಯನ್ನು ಹೊರ ಹಾಕಿದ್ದಾರೆ.ತಾಲೂಕಿನ ಪ್ರಥಮ ಪ್ರಜೆ ಯಾಗಿರುವ ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರು ಇಲಾಖಾಧಿಕಾರಿಗಳ ಧೋರಣೆಗೆ ಬೇಸತ್ತು, ತಮ್ಮ ಅಧ್ಯಕ್ಷತೆಯಲ್ಲೇ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ಬಹಿಷ್ಕರಿಸಿ ವೇದಿಕೆಯಿಂದ ಕೆಳಗಿಳಿದ ಅಪರೂಪದ ಘಟನಾವಳಿಗೆ ತಾ.ಪಂ. ಸಭಾಂಗಣ ಸಾಕ್ಷಿಯಾಯಿತು.

ವಿವಿಧ ಇಲಾಖೆಗಳ ಅಧಿಕಾರಿಗಳು ಅನುಪಾಲನ ವರದಿಯನ್ನು ಸಮಯಕ್ಕೆ ಸರಿಯಾಗಿ ನೀಡದೆ ಸತಾಯಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷೆ ಪುಷ್ಪರಾಜೇಶ್ ಸಭೆಯ ಪ್ರಾರಂಭದಲ್ಲೇ ಸಿಡಿಮಿಡಿ ಗೊಂಡರು.

(ಮೊದಲ ಪುಟದಿಂದ) ಪ್ರಾರಂಭದಲ್ಲಿಯೇ ಅನುಪಾಲನಾ ವರದಿಯನ್ನು ಓದದೇ ಸಭೆಯನ್ನು ನಡೆಸುವ ಅವಶ್ಯಕತೆ ಇಲ್ಲ. ಸಭೆಯನ್ನು ಮುಂದೂಡಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರಿಗೆ ಸೂಚಿಸಿ ತಕ್ಷಣವೇ ವೇದಿಕೆಯಿಂದ ಕೆಳಗಿಳಿದರು.

ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರು ಅಧ್ಯಕ್ಷರ ಮನವೊಲಿಸಿ ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಮನವಿ ಮಾಡಿದರು. ಅಧ್ಯಕ್ಷರೇ ಸಭೆಯಿಂದ ಹೊರ ತೆರಳುವದು ಸರಿಯಲ್ಲ. ಅಧಿಕಾರಿಗಳು ತಮ್ಮ ಕೆಲಸಬಿಟ್ಟು ಸಭೆಯಲ್ಲಿ ಭಾಗವಹಿಸುತ್ತಾರೆ. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸುವದು ನಮ್ಮ ಕರ್ತವ್ಯ ಎಂದು ಉಪಾಧ್ಯಕ್ಷರಾದ ಎಂ.ಬಿ. ಅಭಿಮನ್ಯು ಕುಮಾರ್ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟ ನಂತರ ಸಭೆ ಮುಂದುವರೆಯಿತು.

ಸರಕಾರದ ಬಿಸಿಯೂಟ ಯೋಜನೆಯಡಿ ಶಾಲೆಗಳಿಗೆ ವಿತರಿಸುತ್ತಿರುವ ಅಕ್ಕಿ ಮತ್ತು ಇತರೆ ಸಾಮಗ್ರಿಗಳಿಗೆ ರಾಸಾಯನಿಕ ಪುಡಿಯನ್ನು ಮಿಶ್ರಣ ಮಾಡುವ ಆರೋಪ ಕೇಳಿ ಬರುತ್ತಿದ್ದು, ಇದರ ಬಗ್ಗೆ ಮಾಹಿತಿ ನೀಡಬೇಕೆಂದು ಬಿಸಿಯೂಟ ಯೋಜನಾಧಿಕಾರಿಗೆ ಉಪಾಧ್ಯಕ್ಷರು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಹೇಮಂತ್ ಅಂತಹ ಯಾವದೇ ಪ್ರಕರಣ ನಡೆದಿಲ್ಲ. ಈಗಾಗಲೇ ಕೊಠಡಿಯನ್ನು ಶುಚಿಗೊಳಿಸಿ ಅಕ್ಕಿಯನ್ನು ಸಂಗ್ರಹಿಸಲು ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದರು.

ತಾಲೂಕಿನಾದ್ಯಂತ ತ್ಯಾಜ್ಯ ನಿರ್ವಹಣೆ ಮತ್ತು ಸ್ಮಶಾನ ಜಾಗಕ್ಕೆ ಸಂಬಂಧಿಸಿದ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದು ಅಧ್ಯಕ್ಷರು ಕಂದಾಯ ಇಲಾಖೆಯ ಶಿರಸ್ತೇದಾರ್ ಧರ್ಮಪ್ಪ ಅವರಿಗೆ ಸೂಚಿಸಿದರು.

ಕುಡಿಯುವ ನೀರು ನೈರ್ಮಲ್ಯ ವಿಭಾಗದಲ್ಲಿ 180 ಕಾಮಗಾರಿಗಳ ಪೈಕಿ 125ಕಾಮಗಾರಿ ಪೂರ್ಣಗೊಂಡಿದೆ ಎಂದು ಅಭಿಯಂತರ ರಮೇಶ್ ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಅಭಿಯಂತರ ಜಯರಾಮ್ ಮಾತನಾಡಿ, ಗ್ರಾಮವಿಕಾಸ ಯೋಜನೆಯಡಿ ಹಲವಾರು ಕಾಮಗಾರಿ ಈಗಾಗಲೇ ಮುಗಿದಿದೆ. ಕೆರೆ ಸಂಜೀವಿನಿ ಯೋಜನೆಯಡಿ ಕೆರೆಗಳ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಮಾದಾಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆಗಳಿಗೆ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗೆ ಯಾವದೇ ಆಡಳಿತಾತ್ಮಕ ಜ್ಞಾನವಿಲ್ಲ. ಸಭೆಗಳಿಗೆ ಪ್ರವಾಸಕ್ಕೆ ಬಂದಹಾಗೆ ಬರುತ್ತಾರೆ. ಅವರ ವಿರುದ್ದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳಿ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷರು ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಚಿಟ್ಟಿಯಪ್ಪ ಅವರಿಗೆ ಸೂಚಿಸಿದರು.

ಅಬಕಾರಿ ಇಲಾಖೆಯ ವೃತ್ತ ನಿರೀಕ್ಷಕ ನಟರಾಜ್ ಸಾಮಾನ್ಯ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಗಳಿಗೆ ನಿರಂತರ ಗೈರು ಹಾಜರಾಗುತ್ತಿದ್ದರು. ಅಧಿಕಾರ ವಹಿಸಿಕೊಂಡು 8 ತಿಂಗಳು ಕಳೆದ ನಂತರ ಪ್ರಥಮ ಬಾರಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿರುವದನ್ನು ಗಮನಿಸಿದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತೀವ್ರ ತರಾಟೆಗೆ ತೆಗೆದುಕೊಂಡರು. ರಾಜಕೀಯ ಪ್ರಭಾವ ಇದೆ ಎಂದ ಮಾತ್ರಕ್ಕೆ ಕೆಲಸ ಮಾಡದೇ ಸುಮ್ಮನೆ ಕುಳಿತುಕೊಳ್ಳುವ ಅಧಿಕಾರಿ ಇಲಾಖೆಗೆ ಅವಶ್ಯಕತೆ ಇಲ್ಲ ಎಂದು ಉಪಾಧ್ಯಕ್ಷರು ಹೇಳಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಇಲಾಖಾ ಯೋಜನೆಗಳು, ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.