ವೀರಾಜಪೇಟೆ, ಏ. 13: ವೈದ್ಯರುಗಳು ಬಹುಮುಖ ಸೇವೆ ಯಿಂದ ಕೆಲಸದ ಒತ್ತಡದಲ್ಲಿದ್ದರೂ ದಿನದ ಒಂದು ಗಂಟೆಯಾದರೂ ಆಟೋಟಗಳು, ಮನರಂಜನೆಯಲ್ಲಿ ಕಾಲ ಕಳೆದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವದರಿಂದ ಮನಸ್ಸಿಗೆ ಉಲ್ಲಾಸ ದೊರೆಯಲಿದೆ ಎಂದು ಬೆಂಗಳೂರು ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಎಂ.ಕೆ. ರಮೇಶ್ ಅಭಿಪ್ರಾಯಪಟ್ಟರು.

ವೀರಾಜಪೇಟೆ ಮಗ್ಗುಲ ಗ್ರಾಮದ ಕೊಡಗು ದಂತ ಮಹಾ ವೈದ್ಯಕೀಯ ಕಾಲೇಜಿನ 18ನೇ ಕಾಲೇಜು ವಾರ್ಷಿಕೋತ್ಸವವನ್ನು ಉದ್ಘಾಟಿಸಿದ ಡಾ. ರಮೇಶ್ ಅವರು ವೈದ್ಯರುಗಳು ಸಾಮಾಜಿಕ ಜಾಲ ತಾಣದಲ್ಲಿ ಕಾಲವನ್ನು ಹರಣ ಮಾಡುವ ದಕ್ಕಿಂತಲೂ ಮಾನಸಿಕ ಒತ್ತಡ ಕಡಿಮೆ ಮಾಡಲು ಮನರಂಜನೆಗಳಲ್ಲಿಯೂ ಭಾಗವಹಿಸಬೇಕು. ದೂರದರ್ಶನ ಜಾಲದಲ್ಲಿ ಪಂದ್ಯಾಟವನ್ನು ನೋಡಿ ವಿಮರ್ಶೆ ಮಾಡುವದಕ್ಕಿಂತಲೂ, ಖುದ್ದಾಗಿ ಮೈದಾನದಲ್ಲಿ ಪಂದ್ಯಾಟ ವನ್ನು ಆಯೋಜಿಸಿ ಭಾಗಿಯಾಗಿ ಮಾನಸಿಕವಾಗಿ, ಶಾರೀರಿಕವಾಗಿ ದೃಢತೆಯನ್ನು ಹೊಂದಬೇಕು ಎಂದರು.

ಕೊಡಗು ದಂತ ಮಹಾ ವಿದ್ಯಾಲಯ ಅತ್ಯಲ್ಪ ಅವಧಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ಗಳಿಸಿದೆ. ಕಾಲೇಜಿನಲ್ಲಿ ವ್ಯವಸ್ಥಿತ ವಿದ್ಯಾಭ್ಯಾಸ, ಅಂತರ್ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ವೈದ್ಯಕೀಯ ಸಂಶೋಧನೆಯ ಕಾರ್ಯಗಾರ, ಆಟೋಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆಗೆ ಡಾ. ಸುನಿಲ್ ಮುದ್ದಯ್ಯ ಹಾಗೂ ಕಾಲೇಜಿನ ದಂತ ವೈದ್ಯರ ಕೊಡುಗೆ ಪ್ರಮುಖ ಪಾತ್ರ ವಹಿಸಿದೆ ಎಂದು ಡಾ. ರಮೇಶ್ ಹೇಳಿದರು. ವೇದಿಕೆಯಲ್ಲಿ ಡಾ. ಸುನಿಲ್ ಮುದ್ದಯ್ಯ, ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಆಟೋಟಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಳು ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳ ಟ್ರೋಫಿಯನ್ನು ವಿತರಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಟೋನಿ ಜೋಸೆಫ್ ಸ್ವಾಗತಿಸಿದರು. ತಾನ್ಯ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪಾರ್ವತಿ ಸುದೀಪ್ ವಂದಿಸಿದರು. ನಂತರ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.