ಮಡಿಕೇರಿ, ಏ. 12: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ, ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 – 342 ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ನಕ್ಸಲ್ ಮಾವೊವಾದಿ ರೆಡ್ ಕಾರಿಡಾರ್ – ಐಎಸ್‍ಐಎಸ್ ವಾದಿಗಳ ಗ್ರೀನ್ ಘಜ್ವಾ ತುರ್ ಹಿಂದ್ ಕಾರಿಡಾರ್ ಪಿತೂರಿಯ ಮೂಲಕ ಕೊಡವ ಕುಲವನ್ನು ಮೂಲೋತ್ಪಾಟನೆ ಮಾಡಲು ಹೊಂಚು ಹಾಕುತ್ತಿರುವ ಅಂತರ್ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಿಸಬೇಕೆಂದು, ಅದಕ್ಕಾಗಿ ಕೊಡವರಿಗೆ ಸಂವಿಧಾನ ಖಾತ್ರಿ ಬೇಕೆಂದು ಆಗ್ರಹಿಸಿ ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿ ಯೇಷನ್‍ನಲ್ಲಿ ಸಿ.ಎನ್.ಸಿ. ವತಿಯಿಂದ ಜನಜಾಗೃತಿ ಸಭೆ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಡೆಯಿತು.

ಬಳಿಕ ಮಾತನಾಡಿದ ನಾಚಪ್ಪ, ಕೊಡಗಿನ ಎಲ್ಲಾ ಗ್ರಾಮಗಳಲ್ಲೂ ಮಾವೋವಾದಿ ನಕ್ಸಲರು ಮತ್ತು ಐಎಸ್‍ಐಎಸ್ ಪಾತಕಿಗಳು ಭೂಮಿಯನ್ನು ಕುಬ್ಜ ಮಾಡಲು ದಿಡ್ಡಳ್ಳಿಯ ಮಾದರಿಯಲ್ಲಿ ಕ್ಷಿಪ್ರಧಾಳಿಗೆ ಸಜ್ಜಾಗಿದ್ದು, ಅದಕ್ಕಾಗಿ ಕೊಡಗಿನ ಎಲ್ಲಾ ರೆವಿನ್ಯೂ ಕಚೇರಿಗಳಲ್ಲಿ ಪರಕಾಯ ಪ್ರವೇಶ ಮಾಡಿರುವ ಈ ಕೂಟ ಬೆದರಿಕೆ ತಂತ್ರ ಅನುಸರಿಸುತ್ತಾ ಕೊಡವರನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂಬಂಧ ಒತ್ತುವರಿ ತೆರವು ನೆಪದಲ್ಲಿ ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಉದ್ದೇಶಕ್ಕೆ ಮೀಸಲಿರಿಸುವ ಭೂಮಿಯನ್ನು ಕುಬ್ಜ ಮಾಡಲು ಸಂಚು ಮಾಡಿರುವ ಈ ಕೂಟ ದಿಡ್ಡಳ್ಳಿಯಲ್ಲೇ ಸತ್ಯಾಗ್ರಹ ನಾಟಕ ಮಾಡುತ್ತಾ ಸರ್ಕಾರವನ್ನು ಮತ್ತು ಸಮಾಜವನ್ನು ಬ್ಲ್ಯಾಕ್‍ಮೇಲ್ ಮಾಡುವ ಮೂಲಕ ಸಮಾಜಕಂಟಕರಾಗಿರುವ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದರು.

ಗೋ ಮಾತೆಯನ್ನು ಕಾಮಧೇನು ಎಂದು ಅತ್ಯಂತ ಪೂಜ್ಯ ಭಾವನೆಯಿಂದ ಕೊಡವರು ಅನಾದಿ ಕಾಲದಿಂದಲೂ ಪೋಷಿಸುತ್ತಾ ಬಂದಿದ್ದು, ನಮ್ಮ ಸಂಸ್ಕøತಿಯ ಒಂದು ಭಾಗವಾಗಿ ಗೋ ತಳಿ ಮುಂದುವರಿದಿದ್ದು ಕೊಡಗಿನೊಳಗೆ ಕಸಾಯಿಖಾನೆ ಅಥವಾ ಗೋವಧೆಗೆ ಸಂಪೂರ್ಣ ನಿಷೇಧವನ್ನು 16.1.1835ರಲ್ಲಿ ಬ್ರಿಟೀಷ್ ಕಮೀಷನರ್ ಲೆಫ್ಟಿನೆಂಟ್ ಕರ್ನಲ್ ಜೆ.ಎಸ್. ಪ್ರೇಸರ್ ಆದೇಶ ಹೊರಡಿಸಿದ್ದರು. ಈ ರೀತಿಯ ಸುಗ್ರಿವಾಜ್ಞೆ ಭಾರತದಲ್ಲೆಲ್ಲೂ ಇರಲಿಲ್ಲ. ಅಷ್ಟರ ಮಟ್ಟಿಗೆ ಕೊಡವರಿಗೂ ಗೋವಿಗೂ ಇರುವ ಧಾರ್ಮಿಕ ಸಂಬಂಧವನ್ನು ಪರಿಗಣಿಸಿಯೇ ಬ್ರಿಟೀಷ್ ಸರ್ಕಾರ ಕೊಡಗಿನಲ್ಲಿ ಗೋವಧೆ ನಿಷೇಧ ಮತ್ತು ಗೋ ಸಂವರ್ಧನೆಗೆ ಒತ್ತು ನೀಡಿತ್ತು. ಆದರೆ ಇಂದು ಐಎಸ್‍ಐಎಸ್‍ನ ಮುಖವಾಡದ ಸಂಘಟನೆಯೊಂದು ಕೊಡಗಿನಲ್ಲಿ ಕಸಾಯಿಖಾನೆಯನ್ನು ಅಧಿಕೃತವಾಗಿ ತೆರೆಯಬೇಕೆಂದು ಸವಾಲು ಹಾಕುತ್ತಿರುವದು ಆತಂಕಕಾರಿ ವಿಚಾರ. ಕರ್ನಾಟಕ ಸರ್ಕಾರವು ಹಂತ ಹಂತವಾಗಿ ನಮ್ಮೆಲ್ಲ ಹಕ್ಕು ಕಸಿದುಕೊಂಡಂತೆ ಈ ಗೋ ರಕ್ಷಣೆ ಹಕ್ಕನ್ನು ಕೂಡ ಕಸಿದು ನಮ್ಮ ಧಾರ್ಮಿಕ ಭಾವನೆಯನ್ನು ಅವಮಾನಿಸಿದ್ದನ್ನು ಅರಿತುಕೊಳ್ಳ ಬೇಕೆಂದು ನಾಚಪ್ಪ ಹೇಳಿದರು.

ಬಡ-ಬಗ್ಗರಿಗೆ ಭೂಮಿ ಹಂಚುವ ನೆಪದಲ್ಲಿ ಮಾಜಿ ಸೈನಿಕರನ್ನು ಗುರಿ ಮಾಡಲಾಗುತ್ತಿದೆ. 1971 ರ ವರೆಗೆ ಕರ್ನಾಟಕ ಭೂ ಕಂದಾಯ ಆದಿ ನಿಯಮದಂತೆ ಸೈನಿಕರಿಗೆ ಕನಿಷ್ಟ 5 ಎಕರೆ ಭೂಮಿ ಹಾಗೂ ಅಧಿಕಾರಿಗೆ ಕನಿಷ್ಟ 10 ಎಕರೆ ಜಾಗ ನೀಡಲಾಗುತ್ತಿತ್ತು. ಇಂದು ಆ ಕಾನೂನಿದ್ದರೂ ಅದು ಜಾರಿಯಾಗುತ್ತಿಲ್ಲ. ಪ್ರತೀ ವರ್ಷ ಜೂನ್-ಜುಲೈನಲ್ಲಿ ಹೊರಡಿಸಲಾಗುತ್ತಿದ್ದ ಭೂ ಲಭ್ಯತಾ ಪಟ್ಟಿಯಲ್ಲಿ ಪ್ರತೀ ಗ್ರಾಮದಲ್ಲಿ ಇಂತಿಷ್ಟು ಭೂಮಿ ಮಾಜಿ ಸೈನಿಕರಿಗೆಂದು ಮೀಸಲಿರುವ ನೋಟೀಸು ಜಾರಿ ಮಾಡಲಾಗುತ್ತಿತ್ತು ಎಂದು ನೆನಪಿಸಿದರು.

ಕಾರ್ಯಕ್ರಮದಲ್ಲಿ ಚೇರಂಡ ಸುಭಾಷ್, ಬಲ್ಲಾರಂಡ ಅಬಿನ್, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಮೂಕೊಂಡ ಸುಬ್ರಮಣಿ, ಮಂಡೀರ ಬಬ್ಬು, ಮುಕ್ಕಾಟಿರ ಬೋಪಣ್ಣ, ಕೀತಿಯಂಡ ಅಪ್ಪಚ್ಚು, ಕೀತಿಯಂಡ ವಿವೇಕ್, ಪೊನ್ನಚಂಡ ವಿಷ್ಣು, ಮೇಕೇರಿರ ದಿಲ್ಲಿ, ಮೇಕೇರಿರ ತಿಮ್ಮಯ್ಯ, ಪಾಲಚಂಡ ಜಾಲಿ, ಚೇರಂಡ ಸುನೀಲ್, ಚೇನಂಡ ಕರುಣ್, ಅಪ್ಪಚೆಟ್ಟೋಳಂಡ ಗಿರೀಶ್, ಬಲ್ಲಚಂಡ ಸುನೀಲ್, ಬಲ್ಲಚಂಡ ಚಂದನ್, ಬಲ್ಲಚಂಡ ಮುತ್ತಣ್ಣ, ಪುಟ್ಟಿಚಂಡ ಸನ್ನು, ಪುಟ್ಟಿಚಂಡ ವಿಜು, ಅಣ್ಣಾರ್ಕಂಡ ವಿಜು, ಚೆರ್ಮಾಂದಂಡ ಬಬ್ಬು, ಕುಕ್ಕೇರ ಗಣೇಶ್, ಕುಕ್ಕೇರ ಸಚಿನ್, ಅಣ್ಣಾರ್ಕಂಡ ಮೇದಪ್ಪ, ಕುಕ್ಕೇರ ಪ್ರವೀಣ್, ಚೇರಂಡ ವಿಜಯ್ ಮುಂತಾದವರು ಭಾಗವಹಿಸಿದ್ದರು.