ಪೊನ್ನಂಪೇಟೆ, ಫೆ. 12: ಸಮೀಪದ ಬೇಗೂರಿನ ಮಾಪಿಳ್ಳೆತೋಡು ಕಲ್ಲಾಯಿ ಜುಮಾ ಮಸೀದಿಯ ಅಧೀನದಲ್ಲಿ ವರ್ಷಂಪ್ರತಿ ಜರುಗುವ ಉರೂಸ್ (ನೇರ್ಚೆ) ಮತ್ತು ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮವು ತಾ. 14 ರಿಂದ 16 ರವರೆಗೆ ಜರುಗಲಿದೆ. 3 ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ತಾ. 14 ರಂದು ಶುಕ್ರವಾರ ಜುಮಾ ನಮಾಜ್‍ನ ಬಳಿಕ ಗ್ರಾಮದ ತಕ್ಕಮುಖ್ಯಸ್ಥರಾದ ಆಲೀರ ಚೇಕು ಹಾಜಿಯವರು ಕಲ್ಲಾಯಿ ಜುಮಾ ಮಸೀದಿಯ ಅಧ್ಯಕ್ಷರಾದ ಆಲೀರ ಎ. ಖಾಲಿದ್ ಅವರ ಸಮ್ಮುಖದಲ್ಲಿ ದ್ವಜಾರೋಹಣ ನಡೆಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಬಳಿಕ ಅಂದು ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ‘ಆಧುನಿಕ ಯುಗದ ಸ್ತ್ರೀ ಸಮೂಹ’ ಎಂಬ ವಿಷಯದ ಬಗ್ಗೆ ವಿದ್ವಾಂಸರಾದ ರಫೀಕ್ ಸಹದಿ ದೇಲಂಬಾಡಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ಮಾಪಿಳ್ಳೆತೋಡು ಜುಮಾ ಮಸೀದಿಯ ಖತೀಬರಾದ ಶೌಕತ್‍ಆಲಿ ಶಖಾಫಿ ಉದ್ಘಾಟಿಸಲಿದ್ದಾರೆ. ಕಾಟ್ರಕೊಲ್ಲಿ ಮೊಯಿದ್ದೀನ್ ಜುಮಾ ಮಸೀದಿಯ ಖತೀಬರಾದ ಅಶ್ರಫ್ ಅಮಾನಿ, ಹಳ್ಳಿಗಟ್ಟು ಜುಮಾ ಮಸೀದಿಯ ಅಧ್ಯಕ್ಷರಾದ ಇಸ್ಮಾಯಿಲ್ ಮುಸ್ಲಿಯಾರ್ ಪ್ರಮುಖರಾದ ಎ.ಎಸ್. ಖಾಲೀದ್ ಹಾಗೂ ಎ.ಎಂ. ಉಮ್ಮರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕಲ್ಲಾಯಿ ಜುಮಾ ಮಸೀದಿಯ ಅಧ್ಯಕ್ಷರಾದ ಆಲೀರ ಎ.ಖಾಲಿದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಏ.15 ರಂದು ಶನಿವಾರ ರಾತ್ರಿ 8 ಗಂಟೆಗೆ ಜರುಗುವ ಕಾರ್ಯಕ್ರಮದಲ್ಲಿ ‘ಅಹಂಕಾರವೇ ಅಪಾಯ’ ಎಂಬ ವಿಷಯದ ಬಗ್ಗೆ ವಿದ್ವಾಂಸರಾದ ರಾಫಿ ಹಸನಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬಳಿಕ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಅಸ್ಸಯ್ಯದ್ ಪಳುಲುಲ್ ಹುಸೈನ್ ತಂಙಳ್ ಅವರು ನೇತೃತ್ವ ನೀಡಲಿದ್ದಾರೆ. ಗರಗಂದೂರಿನ ಮುನೀರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಳ್ಳಿಗಟ್ಟು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಮುಸ್ತಫಾ ಸಖಾಫಿ, ಕಾಟ್ರಕೊಲ್ಲಿ ಮೊಯಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾದ ಎಂ.ಎ.ಆಲಿ, ಪ್ರಮುಖರಾದ ಎ.ಎಂ. ರಶೀದ್, ಎ.ಎಂ. ಹಸೈನಾರ್ ಹಾಜಿ, ಎ.ಎಂ. ಅಹಮ್ಮದ್ ಹಾಜಿ ಮತ್ತು ಕೆ.ಎಂ. ಮಮ್ಮು ಅವರು ಪಾಲ್ಗೊಳ್ಳಲಿದ್ದಾರೆ.

16 ರಂದು ಭಾನುವಾರ ಕಾರ್ಯಕ್ರಮದ ಸಮಾರೋಪ ಜರುಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮೌಲೂದ್ ಪಾರಾಯಣದ ಬಳಿಕ ಸಂಜೆ 4 ಗಂಟೆಗೆ ಸಾಮೂಹಿಕ ಅನ್ನಸಂತರ್ಪಣೆ ನಡೆಸಲಾಗುವದು ಎಂದು ಮಾಪಿಳ್ಳೆ ತೋಡು ಕಲ್ಲಾಯಿ ಜುಮಾ ಮಸೀದಿಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.